ಆಗಸ್ಟ್ 03ರಂದು ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೆಜ್ ಕಾಮಗಾರಿಗೆ ಚಾಲನೆ : ಭಗೀರಥ ಭವನದಲ್ಲಿ ಕಾರ್ಯ ಮತ್ತು ಪಾಲನಾ ವಿಭಾಗ (ಎಇಇ) ಕಚೇರಿ ಆರಂಭ!
ಈ ಎರಡು ಮಹತ್ವದ ಯೋಜನೆಗಳಿಂದ ಈ ಭಾಗದ ರೈತಾಪಿ ವರ್ಗದವರಿಗೆ ಹಾಗೂ ವ್ಯಾಪಾರಸ್ಥರಿಗೆ ವರದಾನ :ಕಾಂಗ್ರೆಸ್ ಹಿರಿಯ ಮುಖಂಡ & ಉದ್ಯಮಿ ಸತ್ಯನಾರಾಯಣಪ್ಪ ಅಭಿಮತ!
ಕುಕನೂರು : ‘ಪಟ್ಟಣದಲ್ಲಿ ಇದೇ ಆಗಸ್ಟ್03ರಂದು ಎಪಿಎಂಸಿ ಒಳಾಂಗಣದಲ್ಲಿ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ “ಕೋಲ್ಡ್ ಸ್ಟೋರೇಜ್” ಕಾಮಗಾರಿ ಹಾಗೂ ಪಟ್ಟಣದ ಭಗೀರಥ ಭವನದಲ್ಲಿ ಕೆಇಬಿ ಇಲಾಖೆಯ “ಕಾರ್ಯ ಮತ್ತು ಪಾಲನಾ ವೃತ್ತ” ಕುಕನೂರು (ಎಇಇ) ಕಚೇರಿಯ ಆರಂಭವಾಗುತ್ತಿದೆ. ಈ ಮೂಲಕ ರೈತರ ತಾಲೂಕಿನ ರೈತಾಪಿ ವರ್ಗದ ಜನರಿಗೆ, ವ್ಯಾಪಾರಸ್ಥರಿಗೆ ಹಗೂ ಇನ್ನಿತರ ಸರ್ವೆ ಸಾಮಾನ್ಯ ಜನರಿಗೂ ಇದು ಅನುಕೂಲವಾಗಲಿದೆ’ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಉದ್ಯಮಿ ಸತ್ಯನಾರಾಯಣಪ್ಪ ಹರಪನಹಳ್ಳಿ ಹೇಳಿದರು.
ಇಂದು ಪಟ್ಟಣದಲ್ಲಿ (ಗುರುವಾರ) ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸತ್ಯನಾರಾಯಣಪ್ಪ ಅವರು, ‘ಶಾಸಕರು, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ರಾಜ್ಯ ಸರಕಾರದಿಂದ ಕುಕನೂರು ತಾಲೂಕಿನ ರೈತರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಎಪಿಎಂಸಿಯಲ್ಲಿ ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಕೋಲ್ಡ್ ಸ್ಟೋರೆಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಇದರಿಂದ ಕೃಷಿ ಉತ್ಪನ್ನ ದಾಸ್ತಾನು ವ್ಯವಸ್ಥೆ ದೊರೆತರೆ ರೈತರು ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ. ನಿರೀಕ್ಷಿತ ಬೆಲೆ ಸಿಗದೇ ಇದ್ದಾಗ ಗೋದಾಮು ಅಥವಾ ಕೋಲ್‌ಸ್ಟೋರೇಜ್‌ನಲ್ಲಿಟ್ಟು ಮಾರಾಟ ಮಾಡಬಹುದಾಗಿದೆ. ಇದರಿಂದ ಈ ಭಾಗದಲ್ಲಿ ಪ್ರಮುಖವಾಗಿ ಬೆಳೆಯುವಂತಹ ಹಣ್ಣು ಹಂಪಲು, ಕಡಲೆ, ತರಕಾರಿ, ದಾಳಿಂಬೆ, ಸೇಂಗಾ ಇಂತಹ ಅನೇಕ ಬೆಳೆಗಳನ್ನು ಸಂಗ್ರಹಿಸಲು ಅನುಕೂಲವಾಗಲಿದೆ’ ಎಂದರು.
ಕಾಂಗ್ರೆಸ್ ವಕ್ತಾರ ಹಾಗೂ ಗ್ಯಾರೆಂಟಿ ಯೋಜನೆಗಳ ಸಮಿತಿಯ ತಾಲೂಕಾಧ್ಯಕ್ಷ ಸಂಗಮೇಶ ಗುತ್ತಿ ಮಾತನಾಡಿ, ‘ನಮ್ಮ ಶಾಸಕರರಿಂದ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ. ಎಪಿಎಂಸಿಯಲ್ಲಿ 7 ಕೋಟಿ ರೂ.ವೆಚ್ಚದಲ್ಲಿ ಕೋಲ್ಡ್ ಸ್ಟೋರೆಜ್ ಕಾಮಗಾರಿ ಜೋತೆಗೆ ಕೆಇಬಿ ಇಲಾಖೆಯ ಎಇಇ ವಿಭಾಗಿಯ ಕೇಂದ್ರ ಕಚೇರಿಯ ಆರಂಭ ಆಗಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗುಲ್ಬರ್ಗಾ, ಇದರ ಎಂ.ಡಿ ಕರಿಯಣ್ಣ ಅವರು ಹಾಗೂ ಮುಖ್ಯ ಅಭಿಯಂತರು ಆಗಮಿಸಲಿದ್ದಾರೆ. ಈ ಎರಡು ಕಾರ್ಯಕ್ರಮದ ವೇದಿಕೆ ಒಂದೇ ಕಡೆ ಇರಲಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಇದೇ ಆಗಸ್ಟ್ 3 ರಂದು ಮಧ್ಯಾನ್ಹ 3 ಗಂಟೆಗೆ ಕಾರ್ಯಕ್ರಮ ಜರುಗಲಿದೆ’ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತ್ ಸದಸ್ಯ ಸಿರಾಜ್ ಕರಮುಡಿ, ‘ಕುಕನೂರು ತಾಲೂಕಿಗೆ ಪಟ್ಟಣದ ಭಗೀರಥ ಭವನದಲ್ಲಿ ಪ್ರಮುಖವಾಗಿ ವಿದ್ಯುತ್ ಇಲಾಖೆಯ ಎಇಇ ಕಚೇರಿ ಕಾರ್ಯ ಮತ್ತು ಪಾಲನಾ ಉಪವಿಭಾಗ ಕಚೇರಿ ಆರಂಭವಾಗುತ್ತೀರುವದರಿಂದ ರೈತರಿಗೆ ಯಲಬುರ್ಗಾ ಪಟ್ಟಣಕ್ಕೆ ಹೋಗುವ ಸಮಸ್ಯೆ ತಪ್ಪಲಿದೆ. ಹಾಗಾಗಿ ರೈತರಿಗೆ ಟಿಸಿ ಸಮಸ್ಯೆ ಸೇರಿದಂತೆ ಅನೇಕ ಲೈನ್‍ಗಳ ಚಾಲನೆ, ಬದಲಾವಣೆಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿದ್ದಯ್ಯ ಕಳ್ಳಿಮಠ, ನಗರ ಘಟದ ಅಧ್ಯಕ್ಷ ರೇಹಮಾನಸಾಬ ಮಕ್ಕಪ್ಪನವರ್, ಪ.ಪಂ ಸದಸ್ಯರಾದ ಸಿರಾಜ್ ಕರಮುಡಿ, ಗಗನ್ ನೋಟಗಾರ, ನೂರುದ್ದೀನ್ ಗುಡಿಹಿಂದಲ್, ಪ್ರಶಾಂತ ಆರ್‍ಬೆರಳ್ಳಿನ್, ಮುಖಂಡರಾದ ಮಾಲತೇಶ ಮುಧೋಳ, ಮಂಜುನಾಥ ಯಡಿಯಾಪೂರ, ಸಿದ್ದು ದೊಡ್ಡಮನಿ ಉಪಸ್ಥಿತರಿದ್ದರು.