ರಕ್ಷಣೆ ಇಲ್ಲದೆ ಕುಸಿಯುತ್ತಿದೆ ಐತಿಹಾಸಿಕ ಮುದಗಲ್ಲ ಕೋಟೆ – ಮುದಗಲ್ಲ ಕೋಟೆ.‌.

ಮುದಗಲ್ಲ ವರದಿ..

ರಕ್ಷಣೆ ಇಲ್ಲದೆ ಕುಸಿಯುತ್ತಿದೆ ಐತಿಹಾಸಿಕ ಮುದಗಲ್ಲ ಕೋಟೆ – ಮುದಗಲ್ಲ ಕೋಟೆ.‌.

ಮುದಗಲ್ಲ :ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯದಿಂದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಎರಡು ಸುತ್ತಿನ ಕೋಟೆ ನೆಲ ಸಮಗೊಳ್ಳುತ್ತಿದ್ದು, ರಕ್ಷಣೆ ಮಾಡುವವರು ಯಾರು ಎಂಬ ಯಕ್ಷ ಪ್ರಶ್ನೆ ಮೂಡಿಸಿದೆ.

ದೇವಗಿರಿಯ ಯಾದವರ ನಂತರದಲ್ಲಿ 14ನೇ ಶತಮಾನದಲ್ಲಿ ಆಡಳಿತಕ್ಕೆ ಬಂದ ಕಾಕತೀಯರ ಕಾಲದಲ್ಲಿ ಮುದಗಲ್ಲ ಕೋಟೆ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು ಎಂಬುದು ಇಲ್ಲಿ ದೊರೆತ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.

ಬಹುಮನಿ ಸುಲ್ತಾನರು, ವಿಜಯನಗರದ ಅರಸರು, ಕೊನೆಯಲ್ಲಿ ವಿಜಯಪುರದ ಆದಿಲ್ ಶಾಹಿಗಳ ಅವಧಿಯಲ್ಲಿ ವಿಭಿನ್ನ ಶೈಲಿಯಲ್ಲಿ ನಿರ್ಮಾಣಗೊಂಡ ಕೋಟೆ ಇದಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ನಿರ್ಹವಣೆ, ಮೇಲುಸ್ತುವಾರಿ ಕೊರತೆಯಿಂದ ಮುಳ್ಳುಕಂಟಿ ಬೆಳೆದು ಕುಸಿಯುತ್ತಾ ಸಾಗಿದೆ. ಎರಡು ಸುತ್ತಿನ ಕೋಟೆ ಶೇ. 90ರಷ್ಟು ಮುಳ್ಳುಕಂಟಿ ಬೆಳೆದು ಬಹುತೇಕ ಕಡೆಗಳಲ್ಲಿ ಕುಸಿತವಾಗಿದೆ.

ಕೋಟೆ ದ್ವಾರ ಬಾಗಿಲು ಭಾಗಶಃ ಮುರಿದು ಮುಚ್ಚಲು-ತೆರೆಯಲು ಬಾರದಂತಾಗಿವೆ. ಕೋಟೆ ಸುತ್ತಲಿನ ಕಂದಕ ಘನತ್ಯಾಜ್ಯ ಹಾಕುವ ಸ್ಥಳವಾಗಿದ್ದು, ಕೊಳಚೆ ನೀರು ಸಂಗ್ರಹಗೊಂಡು ರೋಗ ಹರಡುವ ತಾಣವಾಗಿದೆ.

ಶಿಲಾಶಾಸನ, ಕೋಟೆ ರಕ್ಷಣೆಗೆ ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಕೋಟೆ ರಕ್ಷಣೆ ಹೆಸರಲ್ಲಿ ಕೋಟ್ಯಂತರ ಹಣ ಲೂಟಿ ನಡೆಯುತ್ತಿದ್ದರೂ ರಕ್ಷಣೆ ಗಗನ ಕುಸುಮವಾಗಿದೆ. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ಲ ಘಟಕ ಅಧ್ಯಕ್ಷ ನಯೀಮ್ ಆಗ್ರಹಿಸಿದ್ದಾರೆ.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!