ಪ್ರಜಾವೀಕ್ಷಣೆ ಸುದ್ದಿ :
BIG NEWS : ಬಲ್ದೋಟ ಕಾರ್ಖಾನೆ ವಿಸ್ತರಣೆ ವಿಚಾರ : ಕಂಪನಿಯಿಂದ 5% ಹಣ ಕಮೀಷನ್ ಪಡೆದ ಸಚಿವ ತಂಗಡಗಿ : ಬಸವರಾಜ ದಡೇಸುಗೂರು

ಕೊಪ್ಪಳ : ನಗರದ ಹೊರವಲಯದ ಬಲ್ದೋಟ ಕಾರ್ಖಾನೆ ವಿಸ್ತರಣೆ ಕುರಿತು ಪ್ರತಿಭಟನೆ ನಾಟಕವಾಡಿ ಕಂಪನಿಯಿಂದ ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ್ ತಂಗಡಗಿ ಅವರು 5% ಹಣ ಕಮೀಷನ್ ಪಡೆದುಕೊಂಡ್ಡಿದ್ದಾರೆ ಎಂದು ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ದಡೇಸುಗೂರು ಗಂಭೀರ ಆರೋಪ ಮಾಡಿದರು.

ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬಸವರಾಜ ದಡೆಸುಗೂರು ಮಾತನಾಡುತ್ತ ‘ಕಾರ್ಖಾನೆ ವಿಸ್ತರಣೆಯ ವಿರುದ್ಧ ಸರ್ವ ಪಕ್ಷಗಳ ಪ್ರತಿಭಟನೆ ಮಾಡೋಣ ಎಂದು ನಮ್ಮನ್ನು ಕರೆಯಿಸಿ ಕೊಪ್ಪಳದ ಪೂಜ್ಯರಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಸರ್ವ ಪಕ್ಷಗಳ ನಿಯೋಗವನ್ನು ರಾಜಧಾನಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ನಮ್ಮ ಮುಖಾಂತರ ಕಾರ್ಖಾನೆ ವಿಸ್ತರಣೆಯನ್ನು ತಡೆಯುವಂತೆ ಮನವಿ ಮಾಡಿಸಿ ನಂತರ ತಾವು ಕಂಪನಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸದ್ಯಕ್ಕೆ ಸುಮ್ಮನಾಗಿದ್ದಾರೆ ಎಂದು ಆರೋಪ ಮಾಡಿದರು.
ಮೊದಲು ಕಂಪನಿಯವರು 52 ಸಾವಿರ ಕೋಟಿಯ ಯೋಜನೆಗೆ 2% ನೀಡುವುದಾಗಿ ಮುಂದಾಗಿದ್ದು ಇದಕ್ಕೆ ಒಪ್ಪದ ಉಸ್ತುವಾರಿ ಮಂತ್ರಿಗಳು 5% ನೀಡುವಂತೆ ಅಗ್ರಹಪಡಿಸಿರುತ್ತಾರೆ ಇದಕ್ಕೆ ಕಂಪೆನಿಯವರು ಒಪ್ಪದೇ ಇದ್ದಾಗ ಇಷ್ಟೆಲ್ಲ ನಾಟಕವಾಡಿಸಿ ನಮ್ಮನ್ನು ರೊಚ್ಚಿಗೆಬ್ಬಿಸಿ ನಂತರ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಹಾಗೂ ಜಿಲ್ಲೆಯ ಜನತೆಯ ಆಸೆ ಆಕಾಂಕ್ಷೆಗಳು ಹಾಗೂ ಅಭಿಪ್ರಾಯಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ತಮ್ಮ ಕಮಿಷನ್ಗಾಗಿ ಇಲ್ಲಸಲ್ಲದ ಆರೋಪ ಮಾಡಿ ಸರ್ವ ಪಕ್ಷದ ಒಳಗೊಂಡು ಜೊತೆಗೆ ಎಲ್ಲಾ ಸಂಘಟನೆಗಳನ್ನು ಕರೆ ತಂದು ಪ್ರತಿಭಟನೆ ಮಾಡುವ ಮುಖಾಂತರ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆಯ ಸಂದೇಶಕೊಟ್ಟು ನಂತರ ಹೊಂದಾಣಿಕೆ ಮಾಡಿಕೊಂಡಿದ್ದು ಇದರ ಕಮಿಷನ್ ಹಣದಲ್ಲಿ ಕೇವಲ ಉಸ್ತುವಾರಿ ಸಚಿವರಲ್ಲ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳಿಗೆ ಸಲ್ಲುತ್ತದೆ ಎಂದು ಕಡ ಖಂಡಿತವಾಗಿ ಹೇಳುತ್ತೇನೆ ಮತ್ತು ನನ್ನ ಮಾತಿಗೆ ಯಾವಾಗಲೂ ನಾನು ಬದ್ಧನಾಗಿರುತ್ತೇನೆ ಎಂದು ಆರೋಪಗೈದರು.
ಈ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಶರಣು ತಳ್ಳಿಕೇರಿ, ಮಹೇಶ್ ಹಾದಿಮನಿ, ಗಣೇಶ ಹೊರತಟ್ನಾಳ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಕೊಪ್ಪಳ ಸೇರಿದಂತೆ ಈ ಭಾಗದ ಆರಾಧ್ಯ ದೈವ ಹಾಗೂ ನಡೆದಾಡುವ ದೇವರು ಎಂದು ಕರೆಯಿಸಿಕೊಳ್ಳುವ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನೇ ಇವರ ನಾಟಕಕ್ಕೆ ಬಳಕೆ ಮಾಡಿಕೊಂಡಿದ್ದು ವಿಪರ್ಯಾಸದ ವಿಚಾರ ಜೊತೆಗೆ ವಿರೋಧ ಪಕ್ಷದವರಾದ ನಮ್ಮನ್ನು ಸಹ ಜನರ ಹಿತರಕ್ಷಣೆಯ ಮುಖವಾಡ ಧರಿಸಿಕೊಂಡು ಬಳಕೆ ಮಾಡಿಕೊಂಡಿದ್ದಾರೆ ಎಂದು ದಡೆಸುಗೂರು ಹೇಳಿದರು.