ಪ್ರಜಾ ವೀಕ್ಷಣೆ ಸುದ್ದಿ :
LOCAL NEWS : ದೇವಸ್ಥಾನದ ಜಮೀನಿನಲ್ಲಿ ಸರಕಾರಿ ಕಟ್ಟಡಗಳನ್ನು ಬಲವಂತದಿಂದ ನಿರ್ಮಿಸುತ್ತಿರುವುದು ಖಂಡನೀಯ : ಸುರೇಶ ಬಳೂಟಗಿ

ಕುಕನೂರು : ಜಿಲ್ಲೆಯ ಕುಕನೂರು ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಗುದ್ನೆಪ್ಪನಮಠದ ಶ್ರೀ ರುದ್ರಮುನೇಶ್ವರ ದೇವಸ್ಥಾನದ ಭೂಮಿಯಲ್ಲಿ ಸರಕಾರಿ ಕಟ್ಟಡಗಳನ್ನು ಬಲವಂತದಿಂದ ನಿರ್ಮಿಸುತ್ತಿರುವುದು ಖಂಡನೀಯ ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಹೇಳಿದರು.
ಇಂದು ಕುಕನೂರು ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿಯವರು ದೇವಸ್ಥಾನದ ಭೂಮಿಯನ್ನು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು,ಪೊಲೀಸರ ಮುಖಾಂತರ ದಬ್ಬಾಳಿಕೆ ಮಾಡಿ ಬಡ ಮತ್ತು ಅಮಾಯಕರಾದ ಶ್ರೀ ರುದ್ರಮುನೇಶ್ವರ ದೇವಸ್ಥಾನದ ಸೇವಾದಾರರು ತಮ್ಮ ಜೀವನೋಪಾಯಕ್ಕಾಗಿ ಉಳುಮೆ ಮಾಡುವ ಭೂಮಿಯನ್ನು ವಶಪಡಿಸಿಕೊಂಡು ಅಲ್ಲಿ ಸರಕಾರಿ ಕಚೇರಿಗಳ ಕಟ್ಟಡ ಕಟ್ಟಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದರು.
ವೇಳೆ ಕಟ್ಟಡ ಕಟ್ಟಲೇಬೇಕೆಂಬ ಇಚ್ಚೆ ಶಾಸಕರಿಗಿದ್ದರೆ ಬೇರೆ ಕಡೆ ಭೂಮಿ ಹುಡುಕಿ ಕಟ್ಟಲಿ, ಅಥವಾ ಖಾಸಗಿ ಜಮೀನು ಖರೀದಿಸಿ ಕಟ್ಟಲಿ, ಅದನ್ನು ಬಿಟ್ಟು ಹಿಂದೂಗಳ ಭೂಮಿ ಬಿಟ್ಟಿಯಾಗಿ ಸಿಗುತ್ತದೆ, ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ ಎಂಬ ಭ್ರಮೆ ನಿಮ್ಮಲ್ಲಿದ್ದರೆ ಅದನ್ನು ತೆಗೆದು ಹಾಕಿ ನಾವೆಲ್ಲಾ ಒಂದುಗೂಡಿ ರೊಚ್ಚಿಗೆದ್ದರೆ ನಿಮ್ಮ ಸರಕಾರ ಪತನವಾಗುತ್ತದೆ.ಖಾಸಗಿ ಜಮೀನು ಖರೀದಿಸಲು ನೀವೇನು ನಿಮ್ಮ ಸ್ವಂತ ಹಣ ನೀಡಬೇಕಿಲ್ಲ, ಸರ್ಕಾರದ ಬೊಕ್ಕಸದಿಂದ ಭರಿಸಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಿ. ಅದನ್ನು ಬಿಟ್ಟು ನಿಮಗೆಲ್ಲಿ ಉಚಿತವಾಗಿ,ಅನಾಯಾಸವಾಗಿ ಸಿಗುತ್ತದೆ ಎಂದು ದೇವಸ್ಥಾನದ ಭೂಮಿಗೆ ಕಣ್ಣು ಹಾಕಬೇಡಿ. ಅಲ್ಲದೆ ಕ್ಷೇತ್ರದ ಜನರು ಪ್ರಜ್ಞಾವಂತರಿದ್ದು ಇದನ್ನೆಲ್ಲ ಗಮನಿಸುತ್ತಿದ್ದಾರೆ.
ಇದರ ಪ್ರತಿಫಲ ಮುಂದಿನ ಚುನಾವಣೆಯಲ್ಲಿ ನಿಮಗೆ ತೋರಿಸಲಿದ್ದಾರೆ.ಹೀಗಾಗಿ ಈ ಕೂಡಲೇ ಮಾನ್ಯ ಶಾಸಕರು ಇಂಥ ಕೃತ್ಯವನ್ನು ಬಿಟ್ಟು ಬಡ, ಅಮಾಯಕ ಸೇವದಾರರ, ಮತ್ತು ದೇವಸ್ಥಾನದ ಹಿತ ಕಾಪಾಡುವ ಕಾರ್ಯ ಮಾಡಬೇಕೆಂದು ಈ ಮೂಲಕ ನಾವು ಆಗ್ರಹಿಸುತ್ತೇವೆ. ಅದೇ ರೀತಿ ನವಂಬರ್ 04ರ ಮಂಗಳವಾರ ಕುಕನೂರಿನಲ್ಲಿ ನಡೆಯುವ ದೇವಸ್ಥಾನದ ಭೂಮಿ ಉಳಿಸಲು ನಡೆಯುತ್ತಿರುವ ಹೋರಾಟದಲ್ಲಿ ನಮ್ಮ ಬಂಜಾರ ಸಮುದಾಯದ ಎಲ್ಲಾ ಜನರು ಹಾಗೂ ಗೋರ ಸೇನಾದ ಸರ್ವ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸುತ್ತೇವೆ. ಗುದ್ನೆಪ್ಪನಮಠದ ಜನರ ಜೊತೆ ನಾವೆಲ್ಲ ಇದ್ದೇವೆ , ಅವರು ಧೃತಿಗೆಡಬಾರದು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದರು.