You are currently viewing PV NEWS : ಕಾಶಪ್ಪನವರ್ ರಾಜೀನಾಮೆಗೆ ಆಗ್ರಹ: ಕುಕನೂರಿನಿಂದ ಮೊಳಗಿದ ‘ಹುನಗುಂದ ಚಲೋ’ ಎಚ್ಚರಿಕೆ!

PV NEWS : ಕಾಶಪ್ಪನವರ್ ರಾಜೀನಾಮೆಗೆ ಆಗ್ರಹ: ಕುಕನೂರಿನಿಂದ ಮೊಳಗಿದ ‘ಹುನಗುಂದ ಚಲೋ’ ಎಚ್ಚರಿಕೆ!

PV NEWS : ಕಾಶಪ್ಪನವರ್ ರಾಜೀನಾಮೆಗೆ ಆಗ್ರಹ: ಕುಕನೂರಿನಿಂದ ಮೊಳಗಿದ ‘ಹುನಗುಂದ ಚಲೋ’ ಎಚ್ಚರಿಕೆ!

PV NEWS ಕನ್ನಡ 24×7

ಕುಕನೂರು, ಆ.17 : ಹುನಗುಂದ ಶಾಸಕ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಇಳಕಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ‘ಹೊಲಗೇರಿ’ ಸೇರಿದಂತೆ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಕುಕನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

 

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಮೂಲಕ ಶಿರೂರು ವೀರಭದ್ರಪ್ಪ ವೃತ್ತದವರೆಗೆ ತೆರಳಿದರು. ಈ ವೇಳೆ ಸಚಿವ ವಿಜಯಾನಂದ ಕಾಶಪ್ಪನವರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಸುರೇಶ ಆರ್. ಬಳೂಟಗಿ, ಸಚಿವರು ಬಳಸಿದ್ದಾರೆ ಎನ್ನಲಾದ ಪದಗಳು ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಆರೋಪಿಸಿದರು.

“ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಬೇಕು,” ಎಂದು ಅವರು ಆಗ್ರಹಿಸಿದರು.

ಕೇವಲ ವಿಷಾದ ವ್ಯಕ್ತಪಡಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ದಲಿತ ಸಮುದಾಯಕ್ಕೆ ಸ್ಪಷ್ಟವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

ದಲಿತ ಮುಖಂಡ ಲಕ್ಷ್ಮಣ ಕಾಳಿ ಮಾತನಾಡಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಸಚಿವರು ಮಾತನಾಡಿರುವುದು ಖಂಡನೀಯ ಎಂದರು. ಕೂಡಲೇ ಕ್ಷಮೆಯಾಚಿಸದಿದ್ದರೆ ರಾಜ್ಯದಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಭೀಮರಾಜ್ ಸೇನೆ ರಾಜ್ಯಾಧ್ಯಕ್ಷ ಶಿವು ನಾಟಿಕರ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಬಿಜಾಪುರ ಮಾತನಾಡಿ, ಸಚಿವ ವಿಜಯಾನಂದ ಕಾಶಪ್ಪನವರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಹೇಳಿಕೆ ಕುರಿತು ಕ್ಷಮೆಯಾಚಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ನೀಡದಂತೆ ಸಚಿವರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

“ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ವಿಜಯಾನಂದ ಕಾಶಪ್ಪನವರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಕಾಂಗ್ರೆಸ್ ಪಕ್ಷವೂ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಅವರು ಆಗ್ರಹಿಸಿದರು.

ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ‘ಹುನಗುಂದ ಚಲೋ’

ಸರ್ಕಾರ ಈ ವಾರದೊಳಗೆ ಸಚಿವ ವಿಜಯಾನಂದ ಕಾಶಪ್ಪನವರ್ ಅವರ ರಾಜೀನಾಮೆ ಪಡೆಯದಿದ್ದರೆ, ಕುಕನೂರಿನಿಂದ ‘ಹುನಗುಂದ ಚಲೋ’ ಹೆಸರಿನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಸುರೇಶ ಆರ್. ಬಳೂಟಗಿ ಎಚ್ಚರಿಕೆ ನೀಡಿದರು.

ಬೇಡಿಕೆಗಳು ಈಡೇರದಿದ್ದರೆ ಹೋರಾಟವನ್ನು ರಾಜ್ಯದಾದ್ಯಂತ ವಿಸ್ತರಿಸುವುದಾಗಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪ್ರಕಾಶ ಹಿರೇಮನಿ, ದೇವಪ್ಪ ಮನ್ನಾಪುರ, ಸಿದ್ದು ಮಣ್ಣಿನವರ್, ಜಗದೀಶ್ ತೊಂಡಿಹಾಳ, ಸೋಮಣ್ಣ ಇಟಗಿ, ಅನಿಲ್ ಕಾಂಬಳೆ, ಶಿವಪ್ಪ ಬಳಗೇರಿ, ಲೋಹಿತ್ ಬಳಗೇರಿ, ಶಶಿಕುಮಾರ್ ಭಜಂತ್ರಿ, ಭೀಮಶಿ ಭಂಡಾರಿ, ವಿಜಯಕುಮಾರ್ ಚವಾಣ್, ರಾಘವೇಂದ್ರ ಬಳಿಗೇರಿ, ಶಿವಪ್ಪ ಅರಕೇರಿ, ಮುತ್ತು ವಾಲ್ಮೀಕಿ, ಚೇತನ್ ಬಳಿಗೇರಿ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು, ಯುವಕರು, ಮಹಿಳೆಯರು ಹಾಗೂ ಹಿರಿಯರು ಭಾಗವಹಿಸಿದ್ದರು.

Prajavikshane

Chandru R Bhanapaur

Leave a Reply

error: Content is protected !!