LOCAL NEWS : ಕುಕನೂರು | ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳಿಂದ ಸಹಕಾರ ದೊರೆಯುತ್ತಿಲ್ಲ : ಗ್ರಾ. ಪ. ಅಧ್ಯಕ್ಷ ನಾಗರಾಜ್ ವೆಂಕಟಾಪುರ
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು : ‘ಗ್ರಾಮಗಳ ಅಭಿವೃದ್ಧಿಗೆ ಕೆಳ ಹಾಗೂ ಮೇಲ್ಮಟ್ಟದ ಅಧಿಕಾರಿಗಳಿಂದ ಸಹಕಾರ ದೊರೆಯುತ್ತಿಲ್ಲ’ ಎಂದು ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ವೆಂಕಟಾಪುರ ಗಂಭೀರ ಆರೋಪ ಮಾಡಿದರು.
ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ ಗ್ರಾಮ ಪಂಚಾಯಿತಿಯ ಮೂಲಭೂತ ಸೌಕರ್ಯಗಳು, ವಿವಿಧ ವಸತಿ ಯೋಜನೆಗಳಿಂದ ಸೂರಿಲ್ಲದವರಿಗೆ ಸೂರು ನೀಡುವುದರ ಬಗ್ಗೆ ಕಾಳಜಿ ವಹಿಸಬೇಕಾದ ಅಧಿಕಾರಿಗಳೇ ಮೌನವಾಗಿದ್ದು, ಇದಕ್ಕೆ ಸಂಬಂಧಿಸಿದ ಸಾಕಷ್ಟು ಬಾರಿ ಮೇಲಾಧಿಕಾರಿಗಳಿಗೆ ಪತ್ರಗಳ ಮೂಲಕ ತಿಳಿ ಪಡಿಸುವ ಕೆಲಸ ಮಾಡಿದ್ದೇನೆ. ಆದರೂ ಯಾವುದೇ ಪ್ರಯೋಜನವಿಲ್ಲ, ಈ ಸರ್ಕಾರ ಬಂದು ಎರಡುವರೆ ವರ್ಷವಾದರೂ ಕೂಡ ಒಂದು ಮನೆ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀಡಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದರು.
‘ಬನ್ನಿಕೊಪ್ಪ ಗ್ರಾಮದಲ್ಲಿ 1.13 ಕೋಟಿ ರೂಪಾಯಿ ವೆಚ್ಚದಲ್ಲಿ ಬೂದು ನೀರು ನಿರ್ವಹಣಾ ಘಟಕ ಸ್ಥಾಪನೆ ಈಗಾಗಲೇ ಟೆಂಡರ್ ಪ್ರಕ್ರಿಯೆಗಳು ಮುಕ್ತಾಯವಾಗಿದ್ದು, ಆಡಳಿತಾತ್ಮಕ ಅನುಮೋದನೆ ಕೂಡ ದೊರೆತಿದ್ದು, ಆದರೆ ಗ್ರಾಮದಲ್ಲಿ ಇನ್ನೂ ಕೂಡ ಯಾವುದೇ ಕೆಲಸ ಪ್ರಗತಿಯಾಗಿಲ್ಲ, ಹೊಸದಾಗಿ ನಿರ್ಮಾಣ ಮಾಡಿರುವ ನಿವೇಶನಗಳಿಗೆ ಸರಿಯಾದ ಮೂಲಭೂತ ಸೌಕರ್ಯಗಳ ಒದಗಿಸದಿರುವುದು ಬಹುದೊಡ್ಡ ದುರಂತದ ಸಂಗತಿ ಎಂದು ಹೇಳುವುದು ಎಂದರು.
ಅಧ್ಯಕ್ಷರ ಪ್ರಮುಖ ಅಂಶಗಳು
* ಪಂಚಾಯಿತಿಗೆ ಅನುದಾನ ಕೊರತೆ : ಸರ್ಕಾರದಿಂದ ಬಿಡುಗಡೆ ಆಗಬೇಕಾದ ಹಣವನ್ನು ಅಧಿಕಾರಿಗಳು ಸರಿಯಾದ ಸಮಯಕ್ಕೆ ಅನುಮೋದನೆ ನೀಡದಿರುವುದು.
* ಕಾಮಗಾರಿಗಳ ವಿಳಂಬ: ರಸ್ತೆ, ಚರಂಡಿ ಅಥವಾ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದ ಫೈಲ್‌ಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಳ್ಳುವುದು.
* ಗ್ರಾಮ ಸಭೆಗಳಿಗೆ ಅಧಿಕಾರಿಗಳ ಗೈರು ಹಾಜರಿ : ಪಂಚಾಯತ್ ಸಾಮಾನ್ಯ ಸಭೆ ಅಥವಾ ಗ್ರಾಮ ಸಭೆಗಳಿಗೆ ಅಧಿಕಾರಿಗಳು ಬಾರದೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದಿರುವುದು.
ಇದ ಅಲ್ಲದೇ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಹಾಗೂ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (CEO) ಸಾಕಷ್ಟು ಭಾರಿ ಲಿಖಿತ ದೂರು ನೀಡಿದ್ದರೂ ಸಹ ಸ್ಪಂದಿಸಿದರುವುದು ಬೇಸರ ತಂದಿದೆ ಎಂದು ಹೇಳಿದರು.
ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟಿತಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಸ್ಥಳೀಯ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಕಾಳಜಿ ವಹಿಸಿ ನಮ್ಮ ಗ್ರಾಮಕ್ಕೆ ಅಭಿವೃದ್ಧಿ ಪಥದತ್ತ ಸಾಗಿಸಲೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬನ್ನಿಕೊಪ್ಪ ಗ್ರಾಮದ ಹಿರಿಯ ಮುಖಂಡರಾದ ಶಿವಪ್ಪ ಚೌಡಕಿ, ಸಿದ್ದಪ್ಪ ಮಾಳೇಕೊಪ್ಪ ಮರಿಗೌಡ ಚನ್ನಪ್ಪನಗೌಡ ತಗ್ಗಿನಮನಿ ಇದ್ದರು.