You are currently viewing PV NEWS : ಹಳ್ಳಿ ಕವರೇಜ್‌ ಸ್ಟೋರಿ 02 : ಹಳ್ಳಿ ರಸ್ತೆಗಳಿಗೆ ದುರಸ್ತಿ ಭಾಗ್ಯವಿಲ್ಲ: ಧೂಳಿನ ಕಾಟಕ್ಕೆ ಗ್ರಾಮಸ್ಥರು ತತ್ತರ..!
ಬಳಗೇರಿಯಿಂದ ಕುಕನೂರು ಕಡೆಗೆ ಹೋಗುವಾಗ ಕಕ್ಕಿಹಳಿ ತಾಂಡಾದ ರಸ್ತೆಯಲ್ಲಿ ಬಸ್,ಟಿಪ್ಪರ್ ಸಂಚರಿಸುವಾಗ ಧೂಳು ಕಂಡುಬಂದ ದೃಶ್ಯ.

PV NEWS : ಹಳ್ಳಿ ಕವರೇಜ್‌ ಸ್ಟೋರಿ 02 : ಹಳ್ಳಿ ರಸ್ತೆಗಳಿಗೆ ದುರಸ್ತಿ ಭಾಗ್ಯವಿಲ್ಲ: ಧೂಳಿನ ಕಾಟಕ್ಕೆ ಗ್ರಾಮಸ್ಥರು ತತ್ತರ..!

PV NEWS : ಹಳ್ಳಿ ಕವರೇಜ್‌ ಸ್ಟೋರಿ 02 : ಹಳ್ಳಿ ರಸ್ತೆಗಳಿಗೆ ದುರಸ್ತಿ ಭಾಗ್ಯವಿಲ್ಲ: ಧೂಳಿನ ಕಾಟಕ್ಕೆ ಗ್ರಾಮಸ್ಥರು ತತ್ತರ..!

ಬಳಗೇರಿಯಿಂದ ಕುಕನೂರು ಕಡೆಗೆ ಹೋಗುವಾಗ ಕಕ್ಕಿಹಳಿ ತಾಂಡಾದ ರಸ್ತೆಯಲ್ಲಿ ಬಸ್,ಟಿಪ್ಪರ್ ಸಂಚರಿಸುವಾಗ ಧೂಳು ಕಂಡುಬಂದ ದೃಶ್ಯ.

ಪ್ರಜಾವೀಕ್ಷಣೆ ಡಿಜಿಟಲ್‌ ಸುದ್ದಿ : 

ಕುಕನೂರು: ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳು ದುರಸ್ತಿ ಕಾಣದೆ ಹದಗೆಟ್ಟಿದ್ದು, ಭಾರೀ ವಾಹನಗಳ ಸಂಚಾರದಿಂದ ಏಳುತ್ತಿರುವ ಧೂಳಿನ ಕಾಟಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಕುಕನೂರು ಪಟ್ಟಣದಿಂದ ಬಳಗೇರಿ ಮಾರ್ಗವಾಗಿ ಮಂಗಳೂರು ತಲುಪುವ ರಸ್ತೆ ಹಲವು ವರ್ಷಗಳಿಂದ ಸಮರ್ಪಕ ದುರಸ್ತಿ ಕಾಣದ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ತಗ್ಗು (ಗುಂಡಿಗಳು) ಕಾಣಿಸಿಕೊಂಡು , ಡಾಂಬರು ಮೇಲ್ತರ ಕಿತ್ತು ಹೋಗಿರುವುದರಿಂದ ವಾಹನಗಳು ಸಂಚರಿಸುವಾಗ ಧೂಳಿನ ಮೋಡ ಏಳುತ್ತಿದೆ. ವಿಶೇಷವಾಗಿ ಮರಳು ಹಾಗೂ ಕಲ್ಲು ಸಾಗಿಸುವ ಟಿಪ್ಪರ್‌ಗಳು, ಟ್ರ್ಯಾಕ್ಟರ್‌ಗಳ ಸಂಚಾರ ಹೆಚ್ಚಿರುವುದರಿಂದ ರಸ್ತೆ ಇನ್ನಷ್ಟು ಹಾಳಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮೀಣ ರಸ್ತೆಗಳನ್ನು ಸಾಮಾನ್ಯವಾಗಿ ಕಡಿಮೆ ತೂಕದ ವಾಹನಗಳ ಓಡಾಟಕ್ಕೆ ವಿನ್ಯಾಸಗೊಳಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿ ತೂಕ ಹೊತ್ತ ವಾಹನಗಳು ನಿರಂತರವಾಗಿ ಸಂಚರಿಸುತ್ತಿರುವುದರಿಂದ ರಸ್ತೆಯ ಮೇಲ್ತರ ಬೇಗನೇ ಹದಗೆಡುತ್ತಿದೆ. ಕೆಲವೆಡೆ ಕಳಪೆ ಕಾಮಗಾರಿಯೂ ಕಾರಣವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

ಡಾಂಬರು–ಜಲ್ಲಿಯ ಮಿಶ್ರಣ ಸಮರ್ಪಕವಾಗಿರದಿದ್ದರೆ ಕೆಲವೇ ತಿಂಗಳಲ್ಲಿ ಜಲ್ಲಿಕಲ್ಲುಗಳು ಹೊರಬಿದ್ದು, ಅವು ಪುಡಿಯಾಗಿ ನವಿರಾದ ಧೂಳಾಗಿ ಗಾಳಿಯಲ್ಲಿ ಹರಡುವ ಸ್ಥಿತಿ ಉಂಟಾಗುತ್ತದೆ. ಧೂಳಿನ ಕಾಟದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. “ಮಕ್ಕಳು ಮತ್ತು ವೃದ್ಧರಲ್ಲಿ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಕಾಣಿಸುತ್ತಿದೆ. ಮನೆ, ಅಂಗಡಿ ಎಲ್ಲವೂ ಧೂಳಿನಿಂದ ತುಂಬುತ್ತಿದೆ,” ಎಂದು ಸ್ಥಳೀಯರು ಹೇಳಿದ್ದಾರೆ.

ರಸ್ತೆ ಬದಿಯ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮೇಲೂ ಧೂಳು ಕುಳಿತು ಉತ್ಪಾದನೆ ಕುಸಿಯುತ್ತಿದೆ ಎಂದು ರೈತರು ತಿಳಿಸಿದ್ದಾರೆ.

“ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ. ನಂತರ ರಸ್ತೆ ಸಮಸ್ಯೆ ಕುರಿತು ಯಾರೂ ಗಮನಹರಿಸುವುದಿಲ್ಲ. ನಾವು ತೆರಿಗೆ ಕಟ್ಟುತ್ತಿದ್ದರೂ ಸುಗಮ ರಸ್ತೆ ಸೌಲಭ್ಯ ಇಲ್ಲದಂತಾಗಿದೆ,” 

– ವಿಜಯ್ ಕುಮಾರ್ ಚವ್ಹಾಣ, ಕಕ್ಕಿಹಳ್ಳಿ ತಾಂಡಾ ನಿವಾಸಿ.

 

ಈ ಧೂಳಿನ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು, ಕಕ್ಕಿಹಳ್ಳಿ, ಕೋನಾಪುರ ಹಾಗೂ ಬಳಗೇರಿ ಗ್ರಾಮಗಳು ರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ಧೂಳು ಬರದಂತೆ ನೀರು ಸಿಂಪಡಣೆಗೆ ಕ್ರಮವಹಿಸಲಾಗುವುದು. ಈ ಬಗ್ಗೆ ಮೇಲಾಧಿಕಾರಿ ಗಮನಕ್ಕೆ ಶೀಘ್ರ ಪರಿಹಾರವಾಗಿ ತರುತ್ತೇನೆ”

  –  ಮಹೇಶಗೌಡ , ಪಿಡಿಓ- ಗ್ರಾ.ಪಂ. ಬಳಗೇರಿ.

ಮಳೆಗಾಲದ ಬಳಿಕ ಆರಂಭವಾದ ಬೇಸಿಗೆಯಲ್ಲಿ ರಸ್ತೆ ತಗ್ಗುಗಳು ಹಾಗೂ ಧೂಳಿನ ಕಾಟ ಸ್ಪಷ್ಟವಾಗಿ ಗೋಚರಿಸಿ, ಹದಗೆಟ್ಟ ರಸ್ತೆಗಳ ದುಸ್ಥಿತಿ ಎದ್ದು ಕಾಣುತ್ತಿದೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿ ಧೂಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹವಾಗಿದೆ.

Leave a Reply

error: Content is protected !!