You are currently viewing P.V.SPECIAL STORY : ಕಣ್ಣೀರಲ್ಲಿ ಕೈತೊಳೆಯುತ್ತಿರುವ ಟೊಮೆಟೊ ಬೆಳೆಗಾರರು.!!

P.V.SPECIAL STORY : ಕಣ್ಣೀರಲ್ಲಿ ಕೈತೊಳೆಯುತ್ತಿರುವ ಟೊಮೆಟೊ ಬೆಳೆಗಾರರು.!!

SPECIAL STORY : ಕಣ್ಣೀರಲ್ಲಿ ಕೈತೊಳೆಯುತ್ತಿರುವ ಟೊಮೆಟೊ ಬೆಳೆಗಾರರು..!!

ಪ್ರಜಾವೀಕ್ಷಣೆ ಡಿಜಿಟಲ್ ವಿಶೇಷ ಸುದ್ದಿ : 

ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್ , ಮಾರ್ಚ್ 12 : ಟೊಮೆಟೊ ಇಂದು ರೈತನ ಪಾಲಿಗೆ ಕಣ್ಣೀರಿನ ಬೆಳೆಯಾಗಿದ್ದು, ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತದಿಂದಾಗಿ ಟೊಮೆಟೊ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಕಿದ ಬಂಡವಾಳವೂ ಕೈಗೆ ಬಾರದೆ ಬೀದಿಗೆ ಬೀಳುವಂತಾಗಿದೆ.

​ಕಳೆದ ತಿಂಗಳವಷ್ಟೇ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಮಾರುಕಟ್ಟೆಯಲ್ಲಿ ದಿಡೀರ್ ಶಾಕ್ ನೀಡಿದೆ. ಒಂದು ಟ್ರೇ ಟೊಮೆಟೊ ಬೆಲೆ ಕೇವಲ 30 ರಿಂದ 40 ರೂಪಾಯಿಗೆ ಇಳಿಕೆಯಾಗಿದೆ. ಅಂದರೆ ಒಂದು ಕೆಜಿ ಟೊಮೆಟೊಗೆ ರೈತನಿಗೆ ಸಿಗುತ್ತಿರುವುದು ಕೇವಲ 2 ರಿಂದ 2.50 ರೂಪಾಯಿ ಮಾತ್ರ!. ಕಟಾವು ಮಾಡಲು ತಗಲುವ ಕೂಲಿ ಮತ್ತು ಮಾರುಕಟ್ಟೆಗೆ ಸಾಗಿಸುವ ಗಾಡಿ ಬಾಡಿಗೆಯೂ ಈ ಬೆಲೆಯಲ್ಲಿ ಸಿಗುತ್ತಿಲ್ಲ ಎಂಬುವುದೇ ವಿಪರ್ಯಾಸ. ಇದರಿಂದ ಆಕ್ರೋಶಗೊಂಡ ರೈತರು ಹಲವೆಡೆ ರಸ್ತೆ ಬದಿಗೆ ಟೊಮೆಟೊ ಸುರಿದು ತಮ್ಮ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ.

ಈ ​ಸಂಕಷ್ಟಕ್ಕೆ ಕಾರಣಗಳೇನು?

  • ಅತಿಯಾದ ಇಳುವರಿ : ಹವಾಮಾನ ಪೂರಕವಾಗಿದ್ದರಿಂದ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಇಳುವರಿ ಬಂದಿದೆ. ಮಾರುಕಟ್ಟೆಗೆ ಸರಬರಾಜು ಹೆಚ್ಚಾಗಿ ಟೊಮೇಟೊ ಬೇಡಿಕೆ ಕುಸಿದಿದೆ.

  • ​ ಕೋಲ್ಡ್ ಸ್ಟೋರೇಜ್ ಕೊರತೆ : ಟೊಮೆಟೊವನ್ನು ಸಂಗ್ರಹಿಸಿಡಲು ಸ್ಥಳೀಯವಾಗಿ ಕೋಲ್ಡ್ ಸ್ಟೋರೇಜ್‌ಗಳಿಲ್ಲ. ಹೀಗಾಗಿ ಬಂದ ಬೆಲೆಗೆ ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವಾಗಿದೆ.

  • ​ಸಂಸ್ಕರಣಾ ಘಟಕಗಳ ಕೊರತೆ: ಟೊಮೆಟೊದಿಂದ ಸಾಸ್ ಅಥವಾ ಪೌಡರ್ ತಯಾರಿಸುವ ಸಣ್ಣ ಕೈಗಾರಿಕೆಗಳು ಈ ಭಾಗದಲ್ಲಿ ಇಲ್ಲದಿರುವುದು ಬೆಲೆ ಕುಸಿತದ ಸಮಯದಲ್ಲಿ ರೈತರಿಗೆ ಮಾರಕವಾಗುತ್ತಿದೆ.

​ಸಾಲದ ಸುಳಿಯಲ್ಲಿ ರೈತರ ಬಾಳು..!

​2 ಎಕರೆ ಟೊಮೆಟೊ ಬೆಳೆಯಲು ಗೊಬ್ಬರ, ಔಷಧಿ, ಪ್ಲಾಸ್ಟಿಕ್ ಮಲ್ಚಿಂಗ್ ಮತ್ತು ಕೂಲಿ ಸೇರಿ ಸುಮಾರು 1 ರಿಂದ 1.5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಬಹುತೇಕ ರೈತರು ಬ್ಯಾಂಕ್ ಅಥವಾ ಕೈಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಈಗಿನ ಬೆಲೆ ನೋಡಿದರೆ ಅಸಲು ಕೂಡ ವಾಪಸ್ ಬರುವ ಲಕ್ಷಣಗಳಿಲ್ಲ ಎಂದು ಗೋಚರವಾಗುತ್ತಿದೆ.

​”ನಾವು ಬೆವರನ್ನೇ ರಕ್ತ ಮಾಡಿ ಬೆಳೆ ಬೆಳೆದರೆ, ಮಾರುಕಟ್ಟೆಯಲ್ಲಿ ಅದಕ್ಕೆ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ. ಇದೀಗ ಬೆಳೆದ ಬೆಳೆ ರಸ್ತೆ ಪಾಲು, ಧನಕರಗಳಿಗೆ ಮೇವಾಗಲಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಲಿದೆ. ಸರ್ಕಾರ ನಮಗೆ ಬೆಂಬಲ ಬೆಲೆ ನೀಡಿದರೆ, ಮರುಜೀವ ಬಂದಂತಾಗುತ್ತದೆ.”

ನೀಲಪ್ಪ ಕುದ್ರಿಕೋಟಗಿ, ಮ್ಯಾದನೇರಿ ಗ್ರಾಮ.

     ರೈತಸಂಕಷ್ಟಕ್ಕೀಡಾದ ರೈತ. 

Leave a Reply

error: Content is protected !!