You are currently viewing SPECIAL STORY : ಹೊಸ ಚೈತನ್ಯ ಹಾಗೂ ಆತ್ಮ ಶುದ್ಧಿಯ ಭರವಸೆಯ ಯುಗದ…ಹಾದಿ ಯುಗಾದಿ..!

SPECIAL STORY : ಹೊಸ ಚೈತನ್ಯ ಹಾಗೂ ಆತ್ಮ ಶುದ್ಧಿಯ ಭರವಸೆಯ ಯುಗದ…ಹಾದಿ ಯುಗಾದಿ..!

SPECIAL STORY : ಹೊಸ ಚೈತನ್ಯ ಹಾಗೂ ಆತ್ಮ ಶುದ್ಧಿಯ ಭರವಸೆಯ ಯುಗದ…ಹಾದಿ ಯುಗಾದಿ..!

ವಿಶೇಷ ವರದಿ :

ಯುಗಾದಿ ಹಬ್ಬವು ಹಲವು ರೀತಿಯಲ್ಲಿ ವಿಶೇಷ ಎಂದೇ ಹೇಳಬಹುದು. ನಮ್ಮ ಪ್ರಕೃತಿಗೂ ಈ ಹಬ್ಬಕ್ಕೂ ನೇರ ಸಂಬಂಧವಿದೆ. ಇಲ್ಲಿಯವರೆಗೂ ಮಾಯವಾಗಿದ್ದ ಹಸಿರೆಲೆಗಳು, ಒಣಗಿದ್ದ ಮರಗಿಡಗಳು ಯುಗಾದಿ ಬಂದಂತೆಯೇ ಹೊಸತನದಿಂದ ಚಿಗುರಿ ಹೂ, ಕಾಯಿ, ಹಣ್ಣುಗಳಿಂದ ಕಂಗೊಳಿಸುತ್ತವೆ. ಹೂಗಳ ಸುಗಂಧದಿಂದ ನಿಸರ್ಗ ಘಮಘಮಿಸುತ್ತದೆ.

ಈ ಚಾಂದ್ರಮಾನ ಯುಗಾದಿ ಹಬ್ಬ ಮಾರ್ಚ್ 19 ರಂದು ಆಚರಿಸಲ್ಪಡಲಿದ್ದು, ಅಂದು ಶ್ರೀ ಪರಾಭವ ನಾಮ ಸಂವತ್ಸರಸ ಆರಂಭವನ್ನು ಸೂಚಿಸುತ್ತದೆ. ಹಿಂದೂ ಪಂಚಾಂಗದ ಪ್ರಕಾರ 60 ವರ್ಷಗಳ ಚಕ್ರದಲ್ಲಿ ಇದೊಂದು ಹೊಸ ಸಂವತ್ಸರವಾಗಿದ್ದು, ಬೇವು-ಬೆಲ್ಲದ ಮಿಶ್ರಣದೊಂದಿಗೆ ಸಂತೋಷ- ದುಃಖ ತುಂಬಿರಲಿದೆ, ಎಂಬ ಸಂದೇಶವನ್ನು ಮತ್ತೊಮ್ಮೆ ಹೊತ್ತು ತಂದಿದೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ, ಹೊಸ ವರುಷಕೆ ಹೊಸ ಹರುಷವನ್ನು ಹೊಸತು ಹೊಸತು ತರುತ್ತಿದೆ… ಎಂಬ ಕವಿವಾಣಿಯಂತೆ ಮತ್ತೆ ಬಂದಿದೆ ಯುಗಾದಿ. ಭಾರತವೆಂದರೆ ಆಧ್ಯಾತ್ಮದ ಮೂಲಕ ದೇಶಪ್ರೇಮ ಬಿತ್ತಿದ ವೀರ ಧೀರರು, ಸಾಧು-ಸಂತರ ನಾಡು. ಇಡೀ ಜಗತ್ತು ಕತ್ತಲೆಯಲ್ಲಿದ್ದಾಗ ಬೆಳಕನ್ನು ಭಾರತದಿಂದ ಕಾಣಬಹುದು ಎಂದು ಜರ್ಮನಿಯ ಮ್ಯಾಕ್ಸ್ ಮುಲ್ಲರ್ ಹೇಳಿದ್ದಾರೆ ಎಂಬುದು ಅರ್ಥಪೂರ್ಣವಾಗಿದೆ. ಅದೇ ರೀತಿ ನಮ್ಮ ಯುಗಾದಿ ಹಬ್ಬವೂ ಹೊಸತನದ, ಹೊಸ ಹಾದಿಗೆ ನಾಂದಿ ಹಾಡುವ ಹಬ್ಬವಾಗಿದೆ.

ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದ’. ಈ ದಿನ ವರ್ಷಾರಂಭ ಮಾಡುವುದಕ್ಕೆ ನೈಸರ್ಗಿಕ, ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿವೆ. ಈ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ ಮತ್ತು ವಸಂತ ಋತು ಪ್ರಾರಂಭವಾಗುತ್ತದೆ. “ಕುಸುಮಾಕರ ವಸಂತ ಋತು ನನ್ನ ವಿಭೂತಿ” ಎಂದು ಭಗವಂತನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಕಾಲದಲ್ಲಿ ಹವಾಮಾನ ಸಮಶೀತೋಷ್ಣ, ಉತ್ಸಾಹವರ್ಧಕ ಹಾಗೂ ಆನಂದಕರವಾಗಿರುತ್ತದೆ.

ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿದರೂ, ಪ್ರತಿಪದೆಯ ವೇಳೆಗೆ ಹೊಸ ಚಿಗುರುಗಳು ಮೂಡಿ ಪ್ರಕೃತಿ ಹೊಸ ರೂಪ ತಾಳುತ್ತದೆ. ಆದ್ದರಿಂದ ಯುಗಾದಿ ಹೊಸಚೇತನದ ಸಂಕೇತವಾಗಿದೆ. ಯುಗಾದಿಯಂದು ಆರಂಭವಾಗುವ ಕಾಲಚಕ್ರವು ಸೃಷ್ಟಿಯ ಆರಂಭವನ್ನು ಸೂಚಿಸುತ್ತದೆ. ಅದಕ್ಕೆ ವಿರುದ್ಧವಾಗಿ ಡಿಸೆಂಬರ್ 31ರ ಮಧ್ಯರಾತ್ರಿ ಆರಂಭವಾಗುವ ಹೊಸ ವರ್ಷ ಲಯದ ಸಂಕೇತವಾಗಿದೆ. ಯುಗಾದಿಯನ್ನು ಸೂರ್ಯೋದಯದ ತೇಜಸ್ವಿ ದಿನದೊಂದಿಗೆ ಹೋಲಿಸಬಹುದು.

ನಿಸರ್ಗದ ನಿಯಮದಂತೆ ನಡೆಯುವ ಆಚರಣೆಗಳು ಮನುಷ್ಯರಿಗೆ ಪೂರಕವಾಗುತ್ತವೆ. ಆದ್ದರಿಂದ ಪಾಶ್ಚಾತ್ಯ ಪದ್ಧತಿಯ ಜನವರಿ 1ರ ಬದಲು ಯುಗಾದಿಯನ್ನೇ ವರ್ಷಾರಂಭವಾಗಿ ಆಚರಿಸುವುದು ನಮ್ಮ ಸನಾತನ ಧರ್ಮದ ಹಿತದಲ್ಲಿದೆ.

ಯುಗಾದಿಯ ಐತಿಹಾಸಿಕ ಹಿನ್ನೆಲೆ:  ಈ ದಿನ ಶ್ರೀರಾಮನು ವಾಲಿಯನ್ನು ಸಂಹರಿಸಿದನೆಂದು ಹೇಳಲಾಗುತ್ತದೆ. ಇದೇ ದಿನದಿಂದ ಶಾಲಿವಾಹನ ಶಕವೂ ಪ್ರಾರಂಭವಾಯಿತು. ಶಾಲಿವಾಹನನು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೂ ಇದೇ ಎಂದು ಪರಂಪರೆ ತಿಳಿಸುತ್ತದೆ.

ಯುಗಾದಿಯ ಆಧ್ಯಾತ್ಮಿಕ ಮಹತ್ವ : 
ಬ್ರಹ್ಮದೇವನು ಇದೇ ದಿನ ಸೃಷ್ಟಿಯನ್ನು ನಿರ್ಮಿಸಿದನೆಂಬ ನಂಬಿಕೆ ಇದೆ. ಅಂದರೆ ಸತ್ಯಯುಗವೂ ಇದೇ ದಿನ ಆರಂಭವಾಯಿತು. ಆದ್ದರಿಂದ ಈ ದಿನವನ್ನು ವರ್ಷಾರಂಭವಾಗಿ ಆಚರಿಸುತ್ತಾರೆ. ಯುಗಾದಿಯಂದು ತೇಜಸ್ಸು ಮತ್ತು ಚೈತನ್ಯ ಹೆಚ್ಚು ಪ್ರಮಾಣದಲ್ಲಿ ಪ್ರಕಾಶಿಸುತ್ತದೆ ಎಂಬ ನಂಬಿಕೆಯಿದೆ.


ಆಚರಣೆಗಳು  :- ಯುಗಾದಿ ಪಾಡ್ಯದಂದು ಬೆಳಗ್ಗೆ ಬೇಗ ಎದ್ದು ಅಭ್ಯಂಗ ಸ್ನಾನ ಮಾಡಬೇಕು. ನಂತರ ಮನೆಯ ಬಾಗಿಲುಗಳಿಗೆ ಮಾವಿನ ಎಲೆಯ ತೋರಣ ಕಟ್ಟುವುದು ಶುಭಕರ. ಕೆಂಪು ಹೂವುಗಳ ಅಲಂಕಾರವೂ ಮಾಡುತ್ತಾರೆ. ಇದು ಶುಭದ ಸಂಕೇತವಾಗಿದೆ. ನಂತರ ದೇವರ ಪೂಜೆ ಮಾಡಿ, ಬ್ರಹ್ಮಧ್ವಜವನ್ನು ಏರಿಸುವುದು ವಿಶೇಷ. ಕೋಲಿನ ತುದಿಗೆ ಬಣ್ಣದ ಬಟ್ಟೆ, ಸಕ್ಕರೆಗಂಟು, ಬೇವಿನ ಎಲೆ, ಮಾವಿನ ಎಲೆಗಳನ್ನು ಕಟ್ಟಿಕೊಂಡು ಧ್ವಜವನ್ನು ನಿಲ್ಲಿಸುತ್ತಾರೆ. ಇದನ್ನು ‘ಧರ್ಮಧ್ವಜ’ ಎಂದೂ ಕರೆಯುತ್ತಾರೆ.

ಪಂಚಾಂಗ ಶ್ರವಣವು ಯುಗಾದಿಯ ಪ್ರಮುಖ ಭಾಗ. ಇದರ ಮೂಲಕ ಹೊಸ ವರ್ಷದ ಫಲವನ್ನು ತಿಳಿದುಕೊಳ್ಳುತ್ತಾರೆ. ನಂತರ ಬೇವು-ಬೆಲ್ಲವನ್ನು ಹಂಚುತ್ತಾರೆ. ಇದು ಜೀವನದಲ್ಲಿ ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುವ ಸಂಕೇತವಾಗಿದೆ.

ಗ್ರಾಮೀಣ ಸಂಪ್ರದಾಯಗಳು : ಗ್ರಾಮೀಣ ಭಾಗಗಳಲ್ಲಿ ಯುಗಾದಿಯಂದು ಮೊದಲ ಉಳುಮೆ ಮಾಡುವುದು ರೂಢಿ. ಎತ್ತುಗಳನ್ನು ಅಲಂಕರಿಸಿ ಹೊಲದಲ್ಲಿ ಕೆಲಸ ಪ್ರಾರಂಭಿಸುತ್ತಾರೆ. ಜೋಕಾಲಿ ಕಟ್ಟಿ ಮಕ್ಕಳು ಆಡುವುದು ಸಹ ವಿಶೇಷ ಸಂಪ್ರದಾಯವಾಗಿದೆ. ಜೊತೆಗೆ ಹೋಳಿಗೆ, ಶಾವಿಗೆ ಮುಂತಾದ ಸಾಂಪ್ರದಾಯಿಕ ಊಟಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ಕೆಲವು ಭಾಗಗಳಲ್ಲಿ ಚಂದ್ರ ದರ್ಶನ ಮಾಡಿ, ದೇವರ ದರ್ಶನ, ಹಿರಿಯರಿಗೆ ನಮಸ್ಕಾರ ಮಾಡುವ ಪದ್ಧತಿ ಇದೆ. ಸ್ನೇಹಿತರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬವನ್ನು ಆಚರಿಸುತ್ತಾರೆ.

ಇಂದಿನ ಕಾಲದಲ್ಲಿ ಹಬ್ಬ ಎಂದರೆ ಕೇವಲ ಮನರಂಜನೆ ಎಂಬ ಭಾವನೆ ಹೆಚ್ಚುತ್ತಿದೆ. ಆದರೆ ನಮ್ಮ ಸಂಪ್ರದಾಯದಲ್ಲಿ ಹಬ್ಬವೆಂದರೆ ಚೈತನ್ಯ ಮತ್ತು ಆತ್ಮಶುದ್ಧಿಯ ದಿನ. ಆದ್ದರಿಂದ ಸಾತ್ತ್ವಿಕ ಆಹಾರ, ಸಾಂಸ್ಕೃತಿಕ ಆಚರಣೆಗಳ ಮೂಲಕ ಹಬ್ಬವನ್ನು ಆಚರಿಸಬೇಕು.

ಯುಗಾದಿ ನಮ್ಮ ಹೊಸ ಸಂವತ್ಸರದ ಹಬ್ಬ. ಈ ಹಬ್ಬದ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಉಳಿಸೋಣ. ಹೊಸ ಬಟ್ಟೆ, ಬೇವು-ಬೆಲ್ಲದೊಂದಿಗೆ ಸಂಭ್ರಮದಿಂದ ಯುಗಾದಿಯನ್ನು ಆಚರಿಸೋಣ. ಈ ಯುಗಾದಿ ನಮಗೆ ಹೊಸತನವನ್ನು ತರಲಿ. ಯುಗಾದಿಯ ದಿನ ಸಿಹಿಯನ್ನು ಬಯಸುವ ಜೊತೆಗೆ ಪ್ರಕೃತಿಗೂ ನಾವು ಒಳಿತನ್ನೇ ಮಾಡುವ ಪಣ ತೊಡೋಣ. ವನಸಿರಿಯ ಹಸಿರನ್ನು ಹೆಚ್ಚಿಸುವ, ಪ್ರೀತಿಯ, ಬೆಲ್ಲದ ಯುಗಾದಿ ಮರಳಿ ಬರಲಿ.

ಲೇಖನ : ಸುನೀಲ್‌ ಕುಮಾರ್‌ ಮಠದ್‌, ಪತ್ರಕರ್ತ- ಕುಕನೂರು

Leave a Reply

error: Content is protected !!