You are currently viewing LOCAL NEWS : ಸರಳತೆಯ ಸಾರ ಸಾರಿದ ಸಾಮೂಹಿಕ ವಿವಾಹ ಮಹೋತ್ಸವ : 16 ಜೋಡಿಗಳು ದಾಂಪತ್ಯಕ್ಕೆ ಲಗ್ಗೆ!

LOCAL NEWS : ಸರಳತೆಯ ಸಾರ ಸಾರಿದ ಸಾಮೂಹಿಕ ವಿವಾಹ ಮಹೋತ್ಸವ : 16 ಜೋಡಿಗಳು ದಾಂಪತ್ಯಕ್ಕೆ ಲಗ್ಗೆ!

LOCAL NEWS : ಸರಳತೆಯ ಸಾರ ಸಾರಿದ ಸಾಮೂಹಿಕ ವಿವಾಹ ಮಹೋತ್ಸವ : 16 ಜೋಡಿಗಳು ದಾಂಪತ್ಯಕ್ಕೆ ಲಗ್ಗೆ!

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ : 

ಕುಕನೂರು ಮಾ. 25 : “ಆಡಂಬರದ ಮದುವೆಗಿಂತ ಅರ್ಥಪೂರ್ಣ ವಿವಾಹಗಳು ಪ್ರಸ್ತುತವಾಗಿ ಅಗತ್ಯವಾಗಿದೆ” ಎಂದು ಸಮಾಜ ಸೇವಕ ಕಂಬಳಿ ಕಳಕಪ್ಪ ಅಭಿಪ್ರಾಯಪಟ್ಟರು.

ಇಂದು (ಬುಧವಾರ) ಪಟ್ಟಣದ 19ನೇ ವಾರ್ಡ್‌ನಲ್ಲಿ  ನೀಲಗುಂದ ಗುದ್ನೇಶ್ವರ ಸ್ವಾಮಿ ಸೇವಾ ಸಮಿತಿ ಹಾಗೂ ಗುದ್ನೇಶ್ವರ ಮಠದ ವತಿಯಿಂದ ಆಯೋಜಿಸಲಾಗಿದ್ದ ‘ಸಾಮೂಹಿಕ ವಿವಾಹ ಮಹೋತ್ಸವ’ದಲ್ಲಿ ಸುಮಾರು 16 ಜೋಡಿಗಳು ವೇದಮಂತ್ರಗಳ ಘೋಷದ ನಡುವೆ ಹಸೆಮಣೆ ಏರಿದರು.

‘ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರದಲ್ಲಿ, ಸಹಸ್ರಾರು ಭಕ್ತರು ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ವಿವಾಹ ಬಂಧನಕ್ಕೊಳಗಾಗುವುದು ಜೀವನದ ಸಾರ್ಥಕತೆಯ ಕ್ಷಣವಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪೂಜಾ ವಿಧಿವಿಧಾನಗಳು ಹಾಗೂ ಮಂಗಳಸೂತ್ರ ಧಾರಣೆ ನೆರವೇರಿತು. ಬಳಿಕ ನವ ದಂಪತಿಗಳಿಗೆ ಹಿರಿಯರು ಆಶೀರ್ವಚನ ನೀಡಿ ಶುಭ ಹಾರೈಸಿದರು. ಸಾಮೂಹಿಕ ವಿವಾಹದ ಮೂಲಕ ಸರಳ ಹಾಗೂ ಸಾರ್ಥಕ ವಿವಾಹ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವುದಾಗಿ ಆಯೋಜಕರು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ನೀಲಗುಂದ ಮಠದ ಪ್ರಭುಲಿಂಗ ದೇವರು, ಕುದ್ರಿಮೋತಿಯ ಮೈಸೂರು ಸಂಸ್ಥಾನದ ವಿಜಯ ಮಹಾಂತೇಶ್ವರ ಮಹಾಸ್ವಾಮಿಜೀ, ಬಂಜಾರ ಸಮಾಜದ ಮುಖಂಡ ಸುರೇಶ್ ಬಳೂಟಗಿ ಹಾಗೂ ಮಾಜಿ ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ‘ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟವಾಗಿದ್ದು, ಇದಕ್ಕಾಗಿ ಅನಗತ್ಯವಾಗಿ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರ್ಪಣೆ ಆದರ್ಶವಾಗಿದ್ದು, ಇದು ಕುಟುಂಬಕ್ಕೆ ಮಾತ್ರವಲ್ಲದೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಈ ವೇಳೆ ಯಲಬುರ್ಗಾ ಶ್ರೀಧರ ಮಠದ ಬಸವಲಿಂಗ ಶಿವಚಾರ್ಯರು, ಕುಕನೂರಿನ ಅನ್ನದಾನೇಶ್ವರ ಶಾಖಾ ಮಠದ ಮಹಾದೇವ ದೇವರು, ಸಮಾಜ ಸೇವಕ ಕಳಕಪ್ಪ ಕಂಬಳಿ, ಶಿವಕುಮಾರ್‌ ಕವಳಕೇರಿ ಹಾಗೂ ಮಲ್ಲಣಕೇರಿಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

Leave a Reply

error: Content is protected !!