You are currently viewing LOCAL NEWS : ಕುಕನೂರು : ಪ.ಪಂ. 2026-27ನೇ ಸಾಲಿನ ಮುಂಗಡ ಆಯವ್ಯಯ ಬಜೆಟ್ ಮಂಡನೆ!

LOCAL NEWS : ಕುಕನೂರು : ಪ.ಪಂ. 2026-27ನೇ ಸಾಲಿನ ಮುಂಗಡ ಆಯವ್ಯಯ ಬಜೆಟ್ ಮಂಡನೆ!

LOCAL NEWS : ಕುಕನೂರು :ಪ.ಪಂ. 2026-27ನೇ ಸಾಲಿನ ಮುಂಗಡ ಆಯವ್ಯಯ ಬಜೆಟ್ ಮಂಡನೆ: ಅಭಿವೃದ್ಧಿಗೆ ಒತ್ತು : ಅಧ್ಯಕ್ಷೆ ಲೀಲಾವತಿ ಮುಧೋಳ

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ :

ಕುಕನೂರು, ಮಾ. 26 : ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ 2026-27ನೇ ಸಾಲಿನ ಮುಂಗಡ ಆಯವ್ಯಯ ಬಜೆಟ್ ಮಂಡಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮುಧೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮುಖ್ಯಾಧಿಕಾರಿ ಎನ್. ನಾಗೇಶ್ ಅವರ ನೇತೃತ್ವದಲ್ಲಿ ಬಜೆಟ್ ಮಂಡನೆ ನಡೆಯಿತು.

ಮುಂಗಡ ಆಯವ್ಯಯದ ಪ್ರಕಾರ ಒಟ್ಟು ₹33.13ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದ್ದು, ₹33. 07 ರೂ ಕೋಟಿ ವೆಚ್ಚ ಅಂದಾಜಿಸಲಾಗಿದೆ. ಇದರಿಂದ ₹6,11ಲಕ್ಷ ರೂ ಉಳಿತಾಯ ನಿರೀಕ್ಷಿಸಲಾಗಿದ್ದು, ಶೇಷ ರಹಿತ (Surplus) ಬಜೆಟ್ ರೂಪಿಸಲಾಗಿದೆ ಎಂದು ಅಧ್ಯಕ್ಷೆ ಲೀಲಾವತಿ ಮುಧೋಳ ತಿಳಿಸಿದರು.

ಪಟ್ಟಣದ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ರೂಪಿಸಲಾದ ಈ ಬಜೆಟ್‌ನಲ್ಲಿ ರಸ್ತೆ ನಿರ್ಮಾಣ ಮತ್ತು ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತಾ ಕಾರ್ಯಗಳು, ಒಳಚರಂಡಿ ವ್ಯವಸ್ಥೆ ಹಾಗೂ ಬೀದಿ ದೀಪಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ಆರೋಗ್ಯ ಸೇವೆಗಳು, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೂ ವಿಶೇಷ ಗಮನ ಹರಿಸಲಾಗಿದೆ. ಎಂದರು.

“ಈ ಬಾರಿಯ ಆಯವ್ಯಯವು ಕೇವಲ ಅಂಕಿ-ಅಂಶಗಳ ಬುತ್ತಿಯಲ್ಲ; ಇದು ಪಟ್ಟಣದ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಅಭಿವೃದ್ಧಿಯ ದಿಕ್ಸೂಚಿಯಾಗಿದೆ. ತೆರಿಗೆಯಲ್ಲಿ ಯಾವುದೇ ಏರಿಕೆ ಮಾಡದೆ, ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು” ಎಂದು ಅವರು ಹೇಳಿದರು.

ಸಭೆಯಲ್ಲಿ ಸದಸ್ಯರು ಬಜೆಟ್ ಕುರಿತು ಚರ್ಚೆ ನಡೆಸಿ ತಮ್ಮ ಸಲಹೆಗಳನ್ನು ನೀಡಿದರು. ಮುಖ್ಯಾಧಿಕಾರಿ ಎನ್. ನಾಗೇಶ್ ಅವರು ಜನರ ಸಹಕಾರದೊಂದಿಗೆ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಿರಾಜುದ್ದೀನ್ ಕರಮುಡಿ ಅವರನ್ನು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

“ಹೊಸತನದ ಯೋಜನೆಗಳ ಕೊರತೆ ಕಾಣಿಸುತ್ತದೆ.ಆದರೆ ಪಟ್ಟಣದ ಸ್ವಂತ ಆದಾಯ ಹೆಚ್ಚಿಸುವ ಸ್ಪಷ್ಟ ಯೋಜನೆ ಕಾಣುತ್ತಿಲ್ಲ. ವಾಣಿಜ್ಯ ಮಳಿಗೆಗಳಂತಹ ಆದಾಯ ಮೂಲಗಳ ಅಭಿವೃದ್ಧಿಗೆ ಗಮನ ಅಗತ್ಯ. ಕೇಂದ್ರ ಮತ್ತು ರಾಜ್ಯ ಅನುದಾನಗಳ ಪರಿಣಾಮಕಾರಿ ಬಳಕೆಗಾಗಿ ಕ್ರಿಯಾ ಯೋಜನೆ ರೂಪಿಸಬೇಕು. ಒಟ್ಟಾರೆ ಬಜೆಟ್ ಸಾಮಾನ್ಯ ಮಟ್ಟದಲ್ಲಿದ್ದು, ಸಾರ್ವಜನಿಕರಿಗೆ ಆಶಾದಾಯಕ ಬಜೆಟ್ ಅಲ್ಲ. ಹೊಸತನ ಏನೂ ಇಲ್ಲ, ಹಳೆಯದ್ದನ್ನೇ ಮುಂದುವರಿಸಲಾಗಿದೆ.”

— ಸಿದ್ದಯ್ಯ ಉಳ್ಳಾಗಡ್ಡಿ, ಪ.ಪಂ. ಬಿಜೆಪಿ ಸದಸ್ಯ, ವಾರ್ಡ್ ನಂ. 16

Leave a Reply

error: Content is protected !!