You are currently viewing BIG NEWS : ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ವರಿತ ಕಾರ್ಯಾಚರಣೆ: ಬಾಲ್ಯವಿವಾಹದಿಂದ ಐವರು ಅಪ್ರಾಪ್ತ ಬಾಲಕಿಯರ ರಕ್ಷಣೆ!

BIG NEWS : ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ವರಿತ ಕಾರ್ಯಾಚರಣೆ: ಬಾಲ್ಯವಿವಾಹದಿಂದ ಐವರು ಅಪ್ರಾಪ್ತ ಬಾಲಕಿಯರ ರಕ್ಷಣೆ!

BIG NEWS : ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ವರಿತ ಕಾರ್ಯಾಚರಣೆ: ಬಾಲ್ಯವಿವಾಹದಿಂದ ಐವರು ಅಪ್ರಾಪ್ತ ಬಾಲಕಿಯರ ರಕ್ಷಣೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕೊಪ್ಪಳ ಮಾ. 27 : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುವ ಉಚಿತ ಮಕ್ಕಳ ಸಹಾಯವಾಣಿ 1098 ಕ್ಕೆ ಬಂದ ಕರೆಯಿಂದ ತ್ವರಿತ ಕಾರ್ಯಾಚರಣೆ ಕೈಗೊಂಡ ಮಕ್ಕಳ ರಕ್ಷಣಾ ಘಟಕವು ಬಾಲ್ಯವಿವಾಹಕ್ಕೆ ಒಳಗಾಗಬೇಕಿದ್ದ ಐವರು ಅಪ್ರಾಪ್ತರನ್ನು ರಕ್ಷಿಸಿದೆ.

ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ 1098 ಕ್ಕೆ ಬಂದ ಕರೆಯಲ್ಲಿ ಎರಡೇ ದಿನದಲ್ಲಿ ಐದು ಅಪ್ರಾಪ್ತರನ್ನು ಬಾಲ್ಯ ವಿವಾಹದಿಂದ ರಕ್ಷಣೆ ಮಾಡಿದೆ. ಬೆಳಂ ಬೆಳಗ್ಗೆ ಮಕ್ಕಳ ಸಹಾಯವಾಣಿ-1098 ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆಗೆ ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಬಾಲಕಿಯರು, ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಒಬ್ಬ ಬಾಲಕಿ, ಕಾರಟಗಿ ತಾಲೂಕಿನ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಬಾಲಕಿಯರು ಅಪ್ರಾಪ್ತರಿದ್ದು, ಅವರ ಮದುವೆ ಸಿದ್ದತೆ ನಡೆದಿದೆ. ಅವರನ್ನು ರಕ್ಷಣೆ ಮಾಡುವಂತೆ ಮಕ್ಕಳ ಸಹಾಯವಾಣಿ 1098 ಗೆ ಕರೆ ಬಂದಿತ್ತು.

ಕರೆಯ ಮಾಹಿತಿ ಆಧರಿಸಿ, ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ, ಅಕ್ಕಪಡೆ ಮತ್ತು 112 ಪೊಲೀಸ್ ಸಿಬ್ಬಂದಿ, ವಲಯ ಮೇಲ್ವಿಚಾರಕರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಪುರಸಭೆಯ ಸಿಬ್ಬಂದಿಯ ಸಹಯೋಗದೊಂದಿಗೆ ಐದು ಜನರನ್ನು ರಕ್ಷಿಸಿ, ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಸವರಾಜ ಗುಳೇದ್, ಅಮರಮ್ಮ ಹಿರೇಮಠ, ಬಸಮ್ಮ ಎಸ್., ಮೇಲ್ವಿಚಾರಕಿ ಶ್ರೀದೇವಿ, ಸವಿತಾ, ಅಕ್ಕಪಡೆಯ ಸಾವಿತ್ರಿ, ಪಿ.ಸಿ. ಯಲಮ್ಮ, ಭಾಗ್ಯ, ವಾಹನ ಚಾಲಕ ಶರಣಪ್ಪ ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈಗ ವಿವಾಹ ಮುಹೂರ್ತಗಳು ಆರಂಭವಾಗಿರುವ ಹಿನ್ನೆಲೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ವಧು-ವರರ ವಯಸ್ಸಿನ ದೃಢೀಕರಣವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.

ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ಪೂರ್ತಿಯಾಗಿರುವುದನ್ನು ಖಚಿತಪಡಿಸಿಕೊಂಡ ನಂತರವೇ ವಿವಾಹಕ್ಕೆ ಅನುಮತಿ ನೀಡಬೇಕು. ನಿಯಮಗಳನ್ನು ಉಲ್ಲಂಘಿಸಿ ಬಾಲ್ಯ ವಿವಾಹ ನಡೆಸಲು ಯತ್ನಿಸಿದರೆ ಆಯೋಜಕರು ಮತ್ತು ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ತಿಳಿಸಿದ್ದಾರೆ.

Leave a Reply

error: Content is protected !!