Post Views: 8
BIG NEWS : ಪತ್ರಕರ್ತರ ಸಮಸ್ಯೆಗೆ ಸ್ಪಂದಿಸಲು ಸದಾ ಸಿದ್ಧ : ಬಂಗ್ಲೆ ಮಲ್ಲಿಕಾರ್ಜುನ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಮಾ.30 : ಭಾರತ ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಪತ್ರಿಕೋದ್ಯಮದ ಪ್ರಮುಖ ಕೊಂಡಿಯಾಗಿರುವ ವರದಿಗಾರರು ಇಂದಿನ ದಿನಗಳಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಕೊನೆಯ ಉಸಿರಿರುವ ತನಕ ಸಿದ್ಧನಾಗಿದ್ದೇನೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಹೇಳಿದರು.
ಸೋಮವಾರ ಕುಕನೂರ ಪಟ್ಟಣಕ್ಕೆ ಆಗಮಿಸಿ ಬಳಿಕ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪತ್ರಕರ್ತರನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಆದರೆ ಅವರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರಗಳು ಮುಂದಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಬಸ್ ಪಾಸ್ ಯೋಜನೆ ಕುರಿತು ಮಾತನಾಡಿದ ಅವರು, “ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಸರ್ಕಾರ ಅನುದಾನ ಮೀಸಲಿಟ್ಟಿದ್ದರೂ, ವಿಧಿಸಿರುವ ಕಠಿಣ ಮಾನದಂಡಗಳಿಂದ ಹೆಚ್ಚಿನವರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಯೋಜನೆ ಜಾರಿಗೆ ಬಂದು ಎರಡು ವರ್ಷವಾದರೂ ಬೆರಳಣಿಕೆಯಷ್ಟು ಜನರಿಗೆ ಮಾತ್ರ ಸೌಲಭ್ಯ ಲಭಿಸಿದ್ದು, ಇದು ಕೇವಲ ಹೆಸರಷ್ಟೇ ಆಗಿದೆ” ಎಂದು ಟೀಕಿಸಿದರು.
ಹಲವಾರು ಸಂದರ್ಭಗಳಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನೇ ಪಣಕ್ಕಿಟ್ಟು ಸುದ್ದಿ ಸಂಗ್ರಹಿಸಬೇಕಾಗುತ್ತದೆ. ಆದರೂ ಅವರಿಗೆ ಕನಿಷ್ಠ ಜೀವ ವಿಮೆ ಸೌಲಭ್ಯವೂ ಲಭ್ಯವಾಗದಿರುವುದು ವಿಷಾದನೀಯ ಎಂದು ಹೇಳಿದರು.
ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಡಲು ಸದಾ ಸಿದ್ಧನಿದ್ದು, ಅವರ ಪರವಾಗಿ ನಿಲ್ಲುವುದಾಗಿ ಬಂಗ್ಲೆ ಮಲ್ಲಿಕಾರ್ಜುನ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುನಿಲ್ ಎಸ್. ಮಠದ್, ತಾಲೂಕು ಘಟಕದ ಅಧ್ಯಕ್ಷ ಚಂದ್ರು ಆರ್. ಭಾನಾಪುರ, ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಕೋನಾರಿ, ತಾಲೂಕು ಉಪಾಧ್ಯಕ್ಷ ಮುರಾರಿ ಭಜಂತ್ರಿ, ಜಿಲ್ಲಾ ಸಹ ಕಾರ್ಯದರ್ಶಿ ವೀರಯ್ಯ ವಿ. ಹಿರೇಮಠ, ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಪಾಣೇಗಾಂವ, ಸದಸ್ಯರಾದ ಅಲ್ಲಾಬೇಗಂ ಅಮರವತಿ, ಸಲೀಂ ಅಮರವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.