ರಾಜ್ಯದಲ್ಲೇ ಇದೀಗ ಕೊಪ್ಪಳ ಜಿಲ್ಲೆ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಅದು ಯಾವ ವಿಷಯದಲ್ಲಿ ಹೇಗೆ ಅಂತ ಯೋಚನೆ ಮಾಡುತ್ತಿದ್ದಿರಾ? ಹಾಗಾದರೆ, ಈ ಸ್ಟೋರಿ ಕಂಪ್ಲೀಟ್ ಓದಿ…
ಈ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರ ಗುಳೆ ತಡೆಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಅತಿಹೆಚ್ಚು ಒತ್ತು ನೀಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ ಲಕ್ಷಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿ ಇದೀಗ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದು, ರಾಜ್ಯಕ್ಕೆ ಮಾದರಿಯಾಗಿದೆ.
ರಾಜ್ಯದಲ್ಲಿ ಇದೀಗ ಪ್ರಸ್ತುತ ನರೇಗಾ ಯೋಜನೆಯಡಿಯಲ್ಲಿ ಸುಮಾರು 9,15,433 ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕೊಪ್ಪಳ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ, 1,08,389 ಕೂಲಿಕಾರರಿಗೆ ಕೆಲಸ ಮಾಡುತ್ತಾರೆ. ಹೀಗಾಗಿ ಈ ರೀತಿಯಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯತ್ ಒತ್ತು ನೀಡಿದೆ. ಆದ್ದರಿಂದ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದೆ. ಅದೇ ರಿತಿಯಲ್ಲಿ ನಮ್ಮ ಪಕ್ಕದ ಜಿಲ್ಲೆಯಾದ ರಾಯಚೂರಿನಲ್ಲಿ ಒಟ್ಟು 1,05,816 ಕೆಲಸ ಮಾಡುತ್ತಿದ್ದು, (ದ್ವಿತೀಯ ಸ್ಥಾನ), ಬೆಳಗಾವಿ 94,590 (ಮೂರನೇಯ ಸ್ಥಾನ), ಬಳ್ಳಾರಿ 86,069 (ನಾಲ್ಕನೇ ಸ್ಥಾನ), ಗದಗ 78,334 (ಐದನೇ ಸ್ಥಾನ), ವಿಜಯನಗರ ಜಿಲ್ಲೆಯಲ್ಲೂ 68,381 ಕೂಲಿಕಾರರಿಗೆ ಕೆಲಸ ನೀಡಿ ಆರನೇ ಸ್ಥಾನದಲ್ಲಿದೆ. ಉಳಿದ ಜಿಲ್ಲೆಯವರು ನಂತರದ ಸ್ಥಾನವನ್ನು ಅಲಂಕರಿಸಿವೆ.
ಪ್ರತಿ ವರ್ಷ ಬೇಸಿಗೆ ಬಂತೆಂದರೆ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ತಮ್ಮ ತಮ್ಮ ಊರಗಳಲ್ಲಿ ಯಾವುದೇ ಕೆಲಸ-ಕಾರ್ಯಗಳು ವಿಲ್ಲದ ಕಾರಣದಿಂದಾಗಿ ನಗರ ಪ್ರದೇಶಗಳಿಗೆ ಹಾಗೂ ಕಬ್ಬು ಕಟಾವೊ, ಕಾಫಿ ತೋಟದ ಕೆಲಸಗಳಿಗೆ ದೂರದ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದರು. ಈ ಹಿಂದೆ ಇದ್ದ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಫೌಜಿಯಾ ಬಿ ತರುನಮ್ ಹಾಗೂ ಪ್ರಸ್ತುತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರ ಮಾರ್ಗದರ್ಶನದಲ್ಲಿ ನರೇಗಾ ಯೋಜನೆಯಡಿಯಲ್ಲಿ ಈ ಬಾರಿ ಐಇಸಿ ಚಟುವಟಿಕೆಯಡಿಯಲ್ಲಿ ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ದಿನ ಕೂಲಿಕಾರರಿಗೆ ಅಗತ್ಯ ಮಾಹಿತಿ ಒದಗಿಸಲಾಯಿತು.


2023ರ ಏಪ್ರಿಲ್ 1ರಿಂದ ನರೇಗಾ ಕೂಲಿ ಮೊತ್ತವನ್ನು 316ರೂ.ಗೆ ಹೆಚ್ಚಳವಾಗಿದೆ. ಈ ಬಗ್ಗೆ ಕೂಲಿಕಾರರಿಗೆ ಅರಿವು ಮೂಡಿಸಿ ಯೋಜನೆಯತ್ತ ಕರೆತಂದು ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕೆಲಸ ನೀಡಲಾಗುತ್ತಿದೆ. ಬೆಳಗಾವಿ ಹಾಗೂ ಕಲಬುರಗಿ ವಿಭಾಗ ವ್ಯಾಪ್ತಿಯ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ ಇರುವ ಹಿನ್ನೆಲೆ ನರೇಗಾ ಕೆಲಸದಲ್ಲಿ ಶೇ.30ರಷ್ಟು ರಿಯಾಯತಿ ಸೌಲಭ್ಯವನ್ನು ಸರಕಾರ ನೀಡಿದೆ. ಈ ಯೋಜನೆ ಬಗ್ಗೆ ಕೊಪ್ಪಳ ಜಿಲ್ಲೆಯ ಕೂಲಿಕಾರರಿಗೆ ಹೆಚ್ಚು ಮಾಹಿತಿ ನೀಡಿದ್ದರಿಂದ ಜನ ಗುಳೆ ಬಿಟ್ಟು ನರೇಗಾದಡಿಯಲ್ಲಿ ಕೆಲಸ ಮಾಡಲು ಮುಖ ಮಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಉತ್ತಮ ಮತದಾನ ಆದರೂ ಕೆಲ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ತುಂಬಾ ಕಡಿಮೆ ಆಗಿತ್ತು. ಸದ್ಯ ನರೇಗಾದಡಿಯಲ್ಲಿ ಕೊಪ್ಪಳ ಜಿಲ್ಲೆಯ 153 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಈಗಾಗಲೇ ಕೂಲಿಕಾರರು ಕೆರೆ ಹೂಳೆತ್ತುವುದು, ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಈ ಕಾಮಗಾರಿ ಸ್ಥಳಗಳಲ್ಲಿ ಖುದ್ದಾಗಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಕೂಲಿಕಾರರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿ ಅಣಕು ಮತದಾನ ಮಾಡಿಸಿ, ಮತದಾನ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸುವುದು ಹಾಗೂ ಕೂಲಿಕಾರರಿಗೆ ಮತದಾನದ ಮಹತ್ವ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಿಸಲಾಗುವುದು. ಹೀಗೆ ವ್ಯಾಪಕ ಮತದಾನ ಜಾಗೃತಿ ಪ್ರಚಾರ ಹಿನ್ನೆಲೆಯಲ್ಲಿ ಕಳೆದ ಬಾರಿ ಮತ್ತು ಈ ಬಾರಿಯೂ ಮತದಾನ ಪ್ರಮಾಣ ಹೆಚ್ಚಳಕ್ಕೂ ಕೊಪ್ಪಳ ಜಿಲ್ಲಾ ಪಂಚಾಯತ್ ಮುಂದಾಗಿದೆ.


“ಜಿಲ್ಲೆಯ ಗ್ರಾಮೀಣ ಭಾಗದ ಜನರು ಬೇಸಿಗೆ ಕಾಲದಲ್ಲಿ ಕೆಲಸ ಅರಸಿ ಗುಳೆ ಹೋಗುತ್ತಿದ್ದರು. ಹೀಗಾಗಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನದಿಂದ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆ ಹೆಚ್ಚು ಮಾನವ ದಿನಗಳ ಸೃಜನೆ ಮಾಡಲು ಅನುಕೂಲವಾಗಿದೆ. ನರೇಗಾದಿಂದ ಜನರ ಗುಳೆಯೂ ಕ್ರಮವಾಗಿ ತುಂಬಾ ಕಡಿಮೆ ಆಗಿದೆ. ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕಳೆದ ಒಂದು ತಿಂಗಳಿಂದ ನಿರಂತರವಾಗಿ ಮಾಡುತ್ತಾ ಮತದಾನ ಮಹತ್ವ ತಿಳಿಸಲಾಗುತ್ತಿದೆ”
ರಾಹುಲ್ ರತ್ನಂ ಪಾಂಡೆ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,
ಕೊಪ್ಪಳ.
“ಈ ನರೇಗಾ ಯೋಜನೆಯೂ ಗ್ರಾಮೀಣ ಜನರ ಜೀವ ನಾಡಿಯಾಗಿದೆ ಎಂದು ಹೇಳಬಹುದು. ಏಕೆಂದರೆ ಈ ಭಾಗದ ಜನರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಹಾಗಾಗಿ ಈ ಯೋಜನೆ “ಬರದ ನಾಡಿನ ಭಗೀರಥ” ಇದ್ದ ಹಾಗೆ, ಇದರಿಂದ ಸಾಕಷ್ಟು ಅನುಕೂಲತೆಗಳು ಇವೆ. ದೇವಸ್ಥಾನ, ನಾಲಾ ಹೂಳೆತ್ತುವುದು, ಶಾಲಾ ಆವರಣ ಸ್ವಚ್ಛ ಗೊಳಿಸುವುದು, ಬುದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಹೀಗೆ ಹಲವಾರು ಕೆಲಸ ಕಾರ್ಯಗಳು ನಡೆಯುತ್ತದೆ. ಒಟ್ಟಿನಲ್ಲಿ ಗ್ರಾಮೀನ ಜನತೆಯ ಮಕ್ಕಳ ಶಿಕ್ಷಣದ ಜೊತೆಗೆ ಶ್ರೇಯೋಭಿವೃದ್ಧಿಗೆ ಭಾರೀ ಅನುಕೂಲವಾಗಿದೆ.”
ವಿಷ್ಣು ನಾಯ್ಕ್ (ನವಲಿ ತಾಂಡ)
Pu ಕಾಲೇಜ್ ಅತಿಥಿ ಉಪನ್ಯಾಸಕರು,ಕನಕಗಿರಿ ತಾಲೂಕು
“ಉದ್ಯೋಗ ಖಾತರಿ ಯೋಜನೆಯ ಜಾರಿಗೆ ಬಂದಾಗಿನಿಂದ ಗ್ರಾಮೀನ ಪ್ರದೇಶದ ಜನರಿಗೆ ಸಾಕಷ್ಟು ಉಪಯೋಗವಾಗಿದೆ. ಮಹಿಳೆಯರಿಗೆ ಪುರುಷರಿಗೆ ಸಮಾನ ವೇತನ ಜತೆಗೆ ಗ್ರಾಮೀಣ ಪ್ರದೇಶ ಅಭಿವೃದ್ಧಿ ಆಗುತ್ತಿದೆ.”
ಯಮನೂರಪ್ಪ ಕಟ್ಟಿಮನಿ
ಕಕ್ಕಿಹಳ್ಳಿ, ಗ್ರಾ.ಪಂ.ಸದಸ್ಯ
ಕುಕನೂರು ತಾಲೂಕು