LOCAL NEWS : ಕುಕನೂರಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ: ಕಳಪೆ ಬೀಜ ವಾಪಸ್ ಕಳುಹಿಸಿದ ಅಧಿಕಾರಿಗಳು!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಮೇ 22 : ಇಲ್ಲಿನ ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಇಂದು ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮುಂಬರುವ ಮುಂಗಾರು ಹಂಗಾಮಿಗೆ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ತಲುಪಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

ಗುಣಮಟ್ಟ ಪರಿಶೀಲನೆ – 24 ಕ್ವಿಂಟಾಲ್ ಬೀಜ ವಾಪಸ್:
ಇದೇ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಪ್ರಮೋದ್ ತುಂಬಳ ಅವರು ರೈತ ಸಂಪರ್ಕ ಕೇಂದ್ರದಲ್ಲಿದ್ದ ಹೆಸರುಕಾಳು ಬೀಜದ ದಾಸ್ತಾನನ್ನು ಖುದ್ದಾಗಿ ಭೌತಿಕವಾಗಿ ಪರಿಶೀಲಿಸಿದರು. ಪರಿಶೀಲನೆ ವೇಳೆ ದಾಸ್ತಾನಿನಲ್ಲಿದ್ದ ಕೆಲವು ಬೀಜಗಳು ಗುಣಮಟ್ಟದಿಂದ ಕೂಡಿಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು 24 ಕ್ವಿಂಟಾಲ್ ಹೆಸರುಕಾಳು ಬೀಜವನ್ನು ಮೂಲ ಸಂಸ್ಥೆಗೆ ಹಿಂದಿರುಗಿಸಿದರು.
ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಕುರಿತು ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕರು, “ರೈತರಿಗೆ ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಬೀಜಗಳನ್ನು ವಿತರಿಸಲಾಗುವುದಿಲ್ಲ. ಸದ್ಯದಲ್ಲೇ ಅತ್ಯುತ್ತಮ ಗುಣಮಟ್ಟದ ಪರ್ಯಾಯ ಬೀಜಗಳನ್ನು ಪೂರೈಸಿ ರೈತರಿಗೆ ವಿತರಿಸಲಾಗುವುದು” ಎಂದು ಭರವಸೆ ನೀಡಿದರು.
