LOCAL NEWS : ಸಂವಿಧಾನ ಪೀಠಿಕೆ ಮತ್ತು ಅದರ ಆಶಯಗಳನ್ನು ಎತ್ತಿ ಹಿಡಿದು ಜಾಗೃತಿ ಮೂಲಕ ವಿವಾಹ ವಾರ್ಷಿಕೋತ್ಸವ: ಯುವ ಪತ್ರಕರ್ತ ದಂಪತಿಯ ವಿಭಿನ್ನ ಆಚರಣೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಮೇ 25 : ಇತ್ತೀಚಿನ ದಿನಗಳಲ್ಲಿ ಮದುವೆ ವಾರ್ಷಿಕೋತ್ಸವ ಎಂದರೆ ದುಬಾರಿ ಹೋಟೆಲ್‌ಗಳಲ್ಲಿ ಸಂಭ್ರಮ, ಪ್ರವಾಸ, ಕೇಕ್ ಕಟಿಂಗ್ ಹಾಗೂ ವೈಭವದ ಆಚರಣೆಗಳು ಸಾಮಾನ್ಯವಾಗಿವೆ. ಆದರೆ ಕುಕನೂರಿನ ಯುವ ಪತ್ರಕರ್ತ ಚಂದ್ರು ಭಾನಾಪುರ್ ಮತ್ತು ಅವರ ಪತ್ನಿ ಶ್ವೇತಾ ಭಾನಾಪುರ್ ತಮ್ಮ ವೈವಾಹಿಕ ಜೀವನದ ವಿಶೇಷ ದಿನವನ್ನು ಸಮಾಜಮುಖಿ ಹಾಗೂ ವೈಚಾರಿಕ ನೆಲೆಯಲ್ಲಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷರಾಗಿರುವ ಚಂದ್ರು ಭಾನಾಪುರ್ ದಂಪತಿ “ಸಂವಿಧಾನದೊಂದಿಗೆ ಮದುವೆ ವಾರ್ಷಿಕೋತ್ಸವ” ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿ, ಭಾರತೀಯ ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು.

ಕಾರ್ಯಕ್ರಮದ ಸ್ಥಳವನ್ನು ಸಂವಿಧಾನದ ಆಶಯಗಳನ್ನು ಸಾರುವ ಘೋಷಣೆಗಳೊಂದಿಗೆ ಅಲಂಕರಿಸಲಾಗಿತ್ತು. “ನಾವೆಲ್ಲರೂ ಒಂದೇ – ಸಂವಿಧಾನವೇ ನಮ್ಮ ದಾರಿ”, “ಸಂವಿಧಾನ ಓದಿ – ಸಮಾಜ ಅರಳಿ”, “ಸಮಾನತೆ, ಸ್ವಾತಂತ್ರ್ಯ, ಬಾಂಧವ್ಯ ನಮ್ಮ ಹಕ್ಕು” ಎಂಬ ಬರಹಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಹಾಗೂ ನಿವೃತ್ತ ಉಪನ್ಯಾಸಕ ಆರ್.ಪಿ. ರಾಜೂರು ಮಾತನಾಡಿ, “ಇಂದಿನ ಯುವಜನತೆ ವೈಯಕ್ತಿಕ ಸಂಭ್ರಮಗಳಲ್ಲಿ ತೊಡಗಿಕೊಳ್ಳುವ ಬದಲು ಸಮಾಜದ ಮೌಲ್ಯಗಳನ್ನು ಉಳಿಸುವತ್ತ ಹೆಜ್ಜೆ ಇಡುವುದು ಅತ್ಯಂತ ಶ್ಲಾಘನೀಯ. ಚಂದ್ರು ಮತ್ತು ಶ್ವೇತಾ ದಂಪತಿಯ ಈ ನಡೆ ಇತರ ಯುವ ದಂಪತಿಗಳಿಗೆ ಪ್ರೇರಣೆಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಿದರು. ಈ ವೇಳೆ ದೇಶದ ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ, ಸಮಾನತೆ ಮತ್ತು ನ್ಯಾಯದ ಆಶಯಗಳನ್ನು ನೆನಪಿಸಿಕೊಳ್ಳಲಾಯಿತು.
ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ ಅಥವಾ ದುಬಾರಿ ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಈ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ರಚಿಸಿರುವ “ಸಂವಿಧಾನದ ಓದು” ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಸಂವಿಧಾನದ ಅರಿವು ಮೂಡಿಸುವ ಕಾರ್ಯಕ್ಕೆ ಒತ್ತು ನೀಡಲಾಯಿತು.
“ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ಧರಿಸುವ ಮಹತ್ವದ ಗ್ರಂಥ. ಯುವ ಪೀಳಿಗೆ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ವಿವಾಹ ವಾರ್ಷಿಕೋತ್ಸವವನ್ನು ಕೇವಲ ವೈಯಕ್ತಿಕ ಸಂಭ್ರಮವಲ್ಲ, ಸಮಾಜಕ್ಕೆ ಸಂದೇಶ ನೀಡುವ ಕಾರ್ಯಕ್ರಮವನ್ನಾಗಿ ರೂಪಿಸಿದ್ದೇವೆ”
:- ಚಂದ್ರು ಭಾನಾಪುರ್ , ಅಧ್ಯಕ್ಷ, ಕ.ಕಾ.ನಿ.ಪ. ಧ್ವನಿ ಸಂಘ, ಕುಕನೂರು ತಾಲ್ಲೂಕ.
“ಸಂವಿಧಾನವು ನಮ್ಮೆಲ್ಲರ ಬದುಕಿನ ಮಾರ್ಗದರ್ಶಕ. ಕುಟುಂಬ ಮತ್ತು ಸಮಾಜದಲ್ಲಿ ಸಮಾನತೆ, ಗೌರವ ಹಾಗೂ ಮಾನವೀಯ ಮೌಲ್ಯಗಳು ಉಳಿಯಬೇಕಾದರೆ ಸಂವಿಧಾನದ ಆಶಯಗಳನ್ನು ಪಾಲಿಸಬೇಕು”
:- ಶ್ವೇತಾ ಭಾನಾಪುರ್, ಚಂದ್ರು ಭಾನಾಪುರ್ ಅವರ ಪತ್ನಿ.

