You are currently viewing ಮುದಗಲ್ಲ :- ಬೀಜ, ರಸಗೊಬ್ಬರ ಅಂಗಡಿ ಹಾಗೂ ಪೆಟ್ರೋಲ್ ಬಂಕ್‌ಗಳ ಮೇಲೆ ದಿಢೀರ್ ಪರಿಶೀಲನೆ..

ಮುದಗಲ್ಲ :- ಬೀಜ, ರಸಗೊಬ್ಬರ ಅಂಗಡಿ ಹಾಗೂ ಪೆಟ್ರೋಲ್ ಬಂಕ್‌ಗಳ ಮೇಲೆ ದಿಢೀರ್ ಪರಿಶೀಲನೆ..

ಮುದಗಲ್ಲ :- ಬೀಜ, ರಸಗೊಬ್ಬರ ಅಂಗಡಿ ಹಾಗೂ ಪೆಟ್ರೋಲ್ ಬಂಕ್‌ಗಳ ಮೇಲೆ ದಿಢೀರ್ ಪರಿಶೀಲನೆ..

ಮುದಗಲ್: ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿರುವ ಹಿನ್ನೆಲೆ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಲಿಂಗಸುಗೂರು ತಹಸೀಲ್ದಾರ್ ಸತ್ಯಮ್ಮ ಅವರ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಮುದಗಲ್ ಪಟ್ಟಣದ ವಿವಿಧ ಬೀಜ, ರಸಗೊಬ್ಬರ ಅಂಗಡಿಗಳು ಹಾಗೂ ಪೆಟ್ರೋಲ್ ಬಂಕ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪರಿಶೀಲನೆ ವೇಳೆ ಅಂಗಡಿ ಮಾಲೀಕರಿಗೆ ಹಾಗೂ ಪೆಟ್ರೋಲ್ ಬಂಕ್ ನಿರ್ವಾಹಕರಿಗೆ ಅಗತ್ಯ ಸೂಚನೆಗಳನ್ನು ನೀಡಿದ ತಹಸೀಲ್ದಾರ್, ಗ್ರಾಹಕರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡಬೇಕು ಎಂದು ಸೂಚಿಸಿದರು. ಯಾವುದೇ ಕಾರಣಕ್ಕೂ ಕೃತಕ ಅಭಾವ ಸೃಷ್ಟಿಸಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ, ಮುಂಗಾರು ಬಿತ್ತನೆಗೆ ಅಗತ್ಯವಾದ ಬೀಜ ಮತ್ತು ರಸಗೊಬ್ಬರಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ನಿಗದಿತ ದರದಲ್ಲೇ ಮಾರಾಟ ಮಾಡಬೇಕು ಎಂದು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆ ವಸೂಲಿ ಮಾಡಿದರೆ ಅಥವಾ ರೈತರಿಗೆ ಅನಗತ್ಯ ತೊಂದರೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅವಧಿ ಮೀರಿದ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡದಂತೆ ಸೂಚಿಸಿದ ಅವರು, ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ರೈತರಿಗೆ ಸೇವೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡು ಅಗತ್ಯವಿದ್ದರೆ ಪರವಾನಗಿಯನ್ನೇ ರದ್ದುಪಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪರಿಶೀಲನಾ ಕಾರ್ಯಾಚರಣೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಶ್ರೀಶೈಲ ಬಿಆರ್, ನಾಡತಹಸೀಲ್ದಾರ್ ತುಳಜರಾಮ ಸಿಂಗ್, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಅಮರೇಶ, ಗ್ರಾಮ ಆಡಳಿತಾಧಿಕಾರಿ ದೀಪಿಕಾ ರಾಠೋಡ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಪರಿಶೀಲನೆಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!