LOCAL NEWS : 2028ರ ಚುನಾವಣಾ ಕಣಕ್ಕೆ ಕಳಕಪ್ಪ ಕಂಬಳಿ? ನಾಳೆ ಕಾರ್ಯಾಲಯ ಉದ್ಘಾಟನೆ! ಈ ಬೆನ್ನಲ್ಲೇ ರಾಜಕೀಯ ಚರ್ಚೆ ಮುನ್ನೆಲೆಗೆ!

PV NEWS :
ಕುಕನೂರು, ಜೂ. 02 : ಬಡವರ ಕಷ್ಟ-ಸುಖಗಳಿಗೆ ಸ್ಪಂದಿಸಲು ಮತ್ತು ತಾಲೂಕಿನ ಜನರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ತಮಗೆ ತಾವೇ ಪ್ರೇರಣೆಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಸಮಾಜ ಸೇವಕ ಕಳಕಪ್ಪ ಕಂಬಳಿ ತಿಳಿಸಿದ್ದಾರೆ.
ಸೋಮವಾರ (ಜೂನ್ 01) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ 25 ವರ್ಷಗಳಿಂದ ಪತ್ರಿಕಾ ಮಾಧ್ಯಮದವರು ಹಾಗೂ ಸ್ವಾಮೀಜಿಗಳು ಸೇರಿದಂತೆ ನಮ್ಮ ಎಲ್ಲಾ ಹಿತೈಷಿಗಳು ನನಗೆ ಭಾರಿ ಬೆಂಬಲ ನೀಡುತ್ತಾ ಬಂದಿದ್ದಾರೆ. ಜನರ ಸೇವೆ ಮಾಡಬೇಕೆಂದರೆ ಕೇವಲ ಮನೆಯಲ್ಲೇ ಕುಳಿತರೆ ಸಾಧ್ಯವಿಲ್ಲ. ಅದಕ್ಕೊಂದು ಅಧಿಕಾರ ಅಥವಾ ಸೂಕ್ತ ಸ್ಥಾನಮಾನವಿದ್ದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸೇವೆ ಮಾಡಲು ಸಾಧ್ಯವಾಗುತ್ತದೆ ಎನ್ನುವ ಆಸೆ ನನಗಿದೆ,” ಎಂದರು.
ಪ್ರತಿ ಹಳ್ಳಿಗೂ ಭೇಟಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಸದ್ಯಕ್ಕೆ ನಾವು ಕಾರ್ಯಾಲಯವನ್ನು (ಆಫೀಸ್) ಉದ್ಘಾಟನೆ ಮಾಡುತ್ತಿದ್ದೇವೆ. ಇದಾದ ಬಳಿಕ ನಮ್ಮ ಹಿರಿಯರೊಂದಿಗೆ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಲಿದ್ದೇವೆ. ಅಲ್ಲಿನ ಸಾರ್ವಜನಿಕರು ಹಾಗೂ ಮತದಾರ ಪ್ರಭುಗಳ ಸಲಹೆ-ಸೂಚನೆಗಳನ್ನು ಪಡೆದು, ಅವರ ಅಭಿಪ್ರಾಯಕ್ಕೆ ಗೌರವ ನೀಡಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಪತ್ನಿಯ ಅಧಿಕಾರಾವಧಿಯ ಅಭಿವೃದ್ಧಿ ಕಾರ್ಯಗಳ ಸ್ಮರಣೆ ತಮ್ಮ ಧರ್ಮಪತ್ನಿಯವರು ತಾಲೂಕು ಪಂಚಾಯತ್ ಸದಸ್ಯರಾಗಿದ್ದ (2010ರ ಅವಧಿ) ಸಮಯವನ್ನು ಸ್ಮರಿಸಿದ ಕಂಬಳಿ ಅವರು, “ಆ ಸಮಯದಲ್ಲಿ ತಾಲೂಕು ಪಂಚಾಯತ್‌ಗೆ ಅನುದಾನ ಹಾಗೂ ಅಧಿಕಾರಗಳು ಅತ್ಯಂತ ಸೀಮಿತವಾಗಿದ್ದವು. ಆದಾಗ್ಯೂ, ನಮ್ಮ ಪತ್ನಿಯವರು ಒಟ್ಟು 144 ಹಳ್ಳಿಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದರು. ಸದಸ್ಯರಿಗೆ ಸಿಗಬೇಕಾದ ಅನುದಾನವನ್ನು ಸಮರ್ಪಕವಾಗಿ ಬಳಸಿ ಸಿಸಿ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆ ಹಾಗೂ ಪಿಡಿಒಗಳಿಗೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಜನರ ಅಗತ್ಯಗಳಿಗೆ ಸ್ಪಂದಿಸಿದ್ದರು,” ಎಂದು ವಿವರಿಸಿದರು.
