You are currently viewing LOCAL NEWS : ಶೈಕ್ಷಣಿಕ ಕ್ರಾಂತಿಯ ಹರಿಕಾರ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳ ಸೇವೆ ಸ್ಮರಣೀಯ: ಡಾ. ನಾಗರಾಜ ದಂಡೋತಿ

LOCAL NEWS : ಶೈಕ್ಷಣಿಕ ಕ್ರಾಂತಿಯ ಹರಿಕಾರ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳ ಸೇವೆ ಸ್ಮರಣೀಯ: ಡಾ. ನಾಗರಾಜ ದಂಡೋತಿ

LOCAL NEWS : ಶೈಕ್ಷಣಿಕ ಕ್ರಾಂತಿಯ ಹರಿಕಾರ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳ ಸೇವೆ ಸ್ಮರಣೀಯ: ಡಾ. ನಾಗರಾಜ ದಂಡೋತಿ

PV NEWS ಕನ್ನಡ 24×7 : 

ಕೊಪ್ಪಳ, ಜು.10 : ಗವಿಮಠದ 16ನೇ ಪೀಠಾಧಿಪತಿಗಳಾದ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳು ಶಿಕ್ಷಣದ ಮೂಲಕ ಸಮಾಜದಲ್ಲಿ ಅಕ್ಷರ ಕ್ರಾಂತಿ ಮೂಡಿಸಿದ ಮಹಾನ್ ಸಂತರು ಎಂದು ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ನಾಗರಾಜ ದಂಡೋತಿ ಹೇಳಿದರು.

ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳ 59ನೇ ಪುಣ್ಯಸ್ಮರಣೆ ಹಾಗೂ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗವಿಮಠವು 18 ಪೀಠಾಧಿಪತಿಗಳ ವೈಭವಯುತ ಇತಿಹಾಸ ಹೊಂದಿದ್ದು, ವಾರಣಾಸಿಯಿಂದ ಆಗಮಿಸಿದ ರುದ್ರಮುನಿ ಶಿವಯೋಗಿಗಳಿಂದ ಮಠ ಸ್ಥಾಪನೆಯಾಯಿತು. ಪ್ರಸ್ತುತ ಶ್ರೀ ಮ.ನಿ.ಪ್ರ.ಸ್ವ.ಜ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು 18ನೇ ಪೀಠಾಧಿಪತಿಗಳಾಗಿ ಮಠವನ್ನು ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಲಿಂ. ಮರಿಶಾಂತವೀರ ಮಹಾಶಿವಯೋಗಿಗಳು ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ಜುಕ್ತಿ ಹಿರೇಮಠ ಮನೆತನದಲ್ಲಿ ಬಸವಲಿಂಗಯ್ಯ ಹಾಗೂ ಶಾಂತಮ್ಮ ದಂಪತಿಯವರ ಪುತ್ರರಾಗಿ ಜನಿಸಿದ್ದು, ಅವರ ಮೂಲ ಹೆಸರು ಗುರುನಂಜಯ್ಯ. ಸೂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಳಿಕ ಬಟಗೇರಿ, ಸೊಲ್ಲಾಪುರ ಹಾಗೂ ಕಾಶಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು ಎಂದು ವಿವರಿಸಿದರು.

ಗವಿಮಠದ 15ನೇ ಪೀಠಾಧಿಪತಿಗಳಾದ ಶಿವಶಾಂತವೀರ ಮಹಾಶಿವಯೋಗಿಗಳ ಆಶಯದಂತೆ 16ನೇ ಪೀಠಾಧಿಪತಿಗಳಾಗಿ ನೇಮಕಗೊಂಡ ಅವರು, ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲಾಧಾರ ಎಂಬ ದೃಢ ನಂಬಿಕೆಯಿಂದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ಹೇಳಿದರು.

1951ರಲ್ಲಿ ಕೊಪ್ಪಳದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಅವರು, 1963ರಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿದರು. ಈ ಭಾಗದ ಶೈಕ್ಷಣಿಕ ಬರವನ್ನು ನೀಗಿಸಿ “ಅಕ್ಷರ ದಾಸೋಹ ಸೂರ್ಯ” ಎಂಬ ಖ್ಯಾತಿಗೆ ಪಾತ್ರರಾದ ಅವರ ಸೇವೆ ಚಿರಸ್ಮರಣೀಯವಾಗಿದೆ ಎಂದರು.

ಸುಮಾರು ಐದು ದಶಕಗಳ ಕಾಲ ಶಿವಾನುಭಾವಿ ಹಾಗೂ ತ್ರಿವಿಧ ದಾಸೋಹಿಯಾಗಿ ಗವಿಮಠದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಅವರು 1967ರ ಜುಲೈ 1ರಂದು ಶಿವಾಧೀನರಾದರು. ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಪುಣ್ಯಸ್ಮರಣೆಯ ದಿನವನ್ನೇ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್‌ನ ಸಂಸ್ಥಾಪನಾ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ, ಪ್ರಾಧ್ಯಾಪಕರಾದ ಡಾ. ದಯಾನಂದ ಸಾಳುಂಕೆ, ಪ್ರೊ. ಶರಣಬಸಪ್ಪ ಬಿಳಿಯಲೇ, ಮಹೇಶ ಬಿರಾದಾರ, ಡಾ. ಸುಂದರ ಮೇಟಿ, ಡಾ. ಶರಣಪ್ಪ ಜಾಲಿಹಾಳ, ಡಾ. ಅರುಣಕುಮಾರ ಎ.ಜಿ., ಡಾ. ಮಂಜುನಾಥ ಎಂ., ಡಾ. ಮಂಜುನಾಥ ಗಾಳಿ, ಡಾ. ರಾಜು ಹೊಸಮನಿ, ಪ್ರವೀಣ ಹಾದಿಮನಿ, ವಿನೋದ ಮುದಿಬಸನಗೌಡರ್, ಡಾ. ಪ್ರಶಾಂತ್ ಕೊಂಕಲ್ ಹಾಗೂ ಸಿಬ್ಬಂದಿಗಳಾದ ಅರುಣ ಪಾಟೀಲ್, ಪ್ರದೀಪ ಬಳ್ಳೊಳ್ಳಿ, ಅಶೋಕ್ ಗೊಗಿ, ಮಾನಪ್ಪ ಕಮ್ಮಾರ, ಕಳಕಯ್ಯ ಹಿರೇಮಠ, ಬಸವರಾಜ ಗುಡ್ಲಾನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!