ಬೆಂಗಳೂರು : ಪ್ರಸ್ತುತ ವರ್ಷದ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಪ್ರಾಯೋಗಿ ಪರೀಕ್ಷೆ ಹೊಂದಿರದ ವಿಷಯಗಳಲ್ಲಿ ಈಗಾಗಲೇ ಹೊಂದಿರುವ 20 ಆಂತರಿಕ ಅಂಕಗಳನ್ನು ಪರೀಕ್ಷೆಗೆ ನಿಗದಿಪಡಿಸಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಮ್ಮ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಈ ಕುರಿತು ಪ್ರಸ್ತಾವನೆಯಲ್ಲಿ 2014-15ನೇ ಸಾಲಿನಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಾಯೋಗಿಕ ತರಗತಿಗಳಿರುವ ವಿಷಯಗಳಲ್ಲಿ 30 ಅಂಕಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಮತ್ತು 70 ಅಂಕಗಳನ್ನು ತಾತ್ವಿಕ ಮುಖ್ಯ ಪರೀಕ್ಷೆಗೆ ನಿಗದಿಪಡಿಸಲಾಗಿದೆ ಹಾಗೂ ಇನ್ನುಳಿದ ಪ್ರಾಯೋಗಿಕ ತರಗತಿಗಳಿಲ್ಲದ ವಿಷಯಗಳಲ್ಲಿ 100 ಅಂಕಗಳ ಪ್ರಶ್ನೆಪತ್ರಿಕೆಯನ್ನು ಸಿದ್ದಪಡಿಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಈ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಪಿಯುಸಿ ವಿದ್ಯಾರ್ಥಿಗಳ ಅವಲೋಕನ ನಿರಂತರವಾಗಿದ್ದು, ಅವರ ಕಲಿಕೆಯನ್ನು ಉತ್ತಮಗೊಳಿಸಲು ಅವಕಾಶ ನೀಡುತ್ತದೆ. ಎಲ್ಲಾ ವಿಷಯಗಳಿಗೆ ಆಂತರಿಕ ಅಂಕಗಳನ್ನು ನೀಡುವ ಮಾದರಿಯನ್ನು ಅನುಸರಿಸಿದ್ದಲ್ಲಿ ಏಕರೂಪತೆಯನ್ನು ತರಬಹುದಾಗಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಲ್ಲಿ 20 ಆಂತರಿಕ ಅಂಕಗಳನ್ನು ಪರೀಕ್ಷೆಗೆ ಪರಿಗಣಿಸುವ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ಎಂದು ತಿಳಿಸಿದ್ದಾರೆ.
ಪಿಯುಸಿ ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಮತ್ತು ಅಸೈನ್ ಮೆಂಟ್ ಅಂಕಗಳು 10 ಆಗಿರುತ್ತದೆ. ಅವುಗಳನ್ನು ಪ್ರಾಜೆಕ್ಟ್ ಹಾಗೂ ಅಸೈನ್ ಮೆಂಟ್ ಗಳಿಗೆ ಬರವಣಿಗೆಯ ವಿಭಾಗಗಕ್ಕೆ 5 ಅಂಕಗಳು, ಪ್ರಸ್ತುತಪಡಿಸಿವುಕೆಗೆ 3 ಅಂಕಗಳು ಮತ್ತು ಸಂದರ್ಶನಕ್ಕೆ 2 ಅಂಕಗಳನ್ನು ಸೇರಿ 10 ಅಂಕ ನಿಗದಿಪಡಿಸಿದೆ ಎಂದಿದ್ದಾರೆ.
*ಸರ್ಕಾರದ ಸುತ್ತೋಲೆಯ ಪ್ರಮುಖ ಸೂಚನೆಗಳು*
1) ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ (ಎಲೆಕ್ಟ್ರಾನಿಕ್ಸ್), ಗಣಕ ವಿಜ್ಞಾನ, ಗೃಹ ವಿಜ್ಞಾನ, ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಮತ್ತು NSQF ವಿಷಯಗಳಾದ IT, Automobile, Retail, Beauty & wellness ಈ ವಿಷಯಗಳಿಗೆ ಆಂತರಿಕ ಮೌಲ್ಯಮಾಪನ ಇರುವುದಿಲ್ಲ. ಈ ಎಲ್ಲಾ ವಿಷಯಗಳಲ್ಲಿ ಯಥಾ ಸ್ಥಿತಿಯನ್ನು ಮುಂದುವರಿಸಲಾಗುತ್ತದೆ ಯಾವುದೇ ವ್ಯತ್ಯಾಸ ಇರುವುದಿಲ್ಲ.
2) ಉಳಿದೆಲ್ಲ ಭಾಷಾ ಹಾಗೂ ಕೋರ್ ವಿಷಯಗಳಲ್ಲಿ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ.
3) ಪ್ರಸ್ತುತ ಅನುಸರಿಸುತ್ತಿರುವ ಕಿರು ಪರೀಕ್ಷೆಗಳನ್ನು 40 ಅಂಕಗಳಿಗೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯನ್ನು 80 ಅಂಕಗಳಿಗೆ ನಡೆಸುವುದು.
4) 80 ಅಂಕಗಳ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಉತ್ತರಿಸುವಲ್ಲಿ ವಿದ್ಯಾರ್ಥಿಗಳು ಕನಿಷ್ಠ 24 ಅಂಕಗಳನ್ನು ಉತ್ತೀರ್ಣತೆಗೆ ಗಳಿಸಲೇಬೇಕು.
5) ಒಂದು ವೇಳೆ ವಿದ್ಯಾರ್ಥಿಯು ಒಂದು ಮತ್ತು ಎರಡನೇ ಕಿರು ಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಯಾವುದಾದರೂ ಒಂದರಲ್ಲಿ ಗೈರು ಹಾಜರಾಗಿದ್ದರೆ ಉಳಿದ ಎರಡು ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳನ್ನು 10 ಅಂಕಗಳಿಗೆ ಪರಿವರ್ತಿಸಿ ಸರಾಸರಿ ತೆಗೆದುಕೊಳ್ಳುವುದು.
6) ವಿದ್ಯಾರ್ಥಿಯು ಕೇವಲ ಒಂದೇ ಒಂದು ಕಿರು ಪರೀಕ್ಷೆ ಅಥವಾ ಮಧ್ಯವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದರೆ ಆ ಅಂಕಗಳನ್ನು ಹತ್ತಕ್ಕೆ ಪರಿವರ್ತಿಸಿ ಅರ್ಧದಷ್ಟು ಅಂಕಗಳನ್ನು ನೀಡುವುದು.
7) ವಿದ್ಯಾರ್ಥಿಯು ಯಾವುದೇ ಕಿರು ಪರೀಕ್ಷೆ ಅಥವಾ ಮಧ್ಯ ವಾರ್ಷಿಕ ಪರೀಕ್ಷೆಗೆ ಹಾಜರಾಗದೆ ಹಾಗೂ ಯಾವುದೇ ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್‌ಗಳನ್ನು ಸಲ್ಲಿಸದೇ ಇದ್ದರೆ ಅವರು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಅಗತ್ಯವಾಗಿ ಬೇಕಾದ 35 ಅಂಕಗಳನ್ನು 80 ಅಂಕಗಳಲ್ಲಿ ಪಡೆಯಬೇಕಾಗುತ್ತದೆ.
8) ಸೂಕ್ತ ಅಸೈನ್‌ಮೆಂಟ್ ಅಥವಾ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಿ 10 ಅಂಕಗಳಿಗೆ ಮೌಲ್ಯಮಾಪನ ಮಾಡುವುದು. ಅಸೈನ್‌ಮೆಂಟ್ ಅಥವಾ ಪ್ರಾಜೆಕ್ಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ಪಕ್ಷಪಾತವಿಲ್ಲದೆ ಅಂಕಗಳನ್ನು ನೀಡುವುದು ಹಾಗೂ ಸದರಿ ದಾಖಲೆಗಳನ್ನು ಪರೀಕ್ಷಾ ನಂತರದ ನಾಲ್ಕು
ತಿಂಗಳ ಅವಧಿಯವರೆಗೂ ಕಾಯ್ದಿರಿಸುವುದು(ಉತ್ತರ ಪತ್ರಿಕೆಗಳನ್ನು ಕಾಯ್ದಿರಿಸುವ ಮಾದರಿಯಲ್ಲಿ)
9) ಪ್ರತಿ ವಿದ್ಯಾರ್ಥಿಯೂ ಪ್ರತ್ಯೇಕವಾಗಿ ಅಸೈನ್‌ಮೆಂಟ್‌ಗಳನ್ನು ನೀಡುವುದು.
10) ಆಯಾ ಜಿಲ್ಲೆಗಳ ವಿಷಯವಾರು ಉಪನ್ಯಾಸಕರ ವೇದಿಕೆಯಲ್ಲಿ ಪ್ರಾಜೆಕ್ಟ್ ಅಥವಾ ಅಸೈನ್‌ಮೆಂಟ್‌ಗಳ ಶೀರ್ಷಿಕೆಗಳನ್ನು ಸಿದ್ಧಪಡಿಸಿ ಪಟ್ಟಿಯನ್ನು ವಿದ್ಯಾರ್ಥಿಗಳಿಗೆ ನೀಡುವುದು ಹಾಗೂ ಆ ಶೀರ್ಷಿಕೆಗಳನ್ನು ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಅನುಸರಿಸುವುದು.
11) ಕಾಲೇಜುಗಳ ಪ್ರಾಂಶುಪಾಲರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಆಂತರಿಕ ಮೌಲ್ಯಮಾಪನ ಕಾರ್ಯ, ಅಂಕಗಳ ನೀಡಿಕೆ ಹಾಗೂ ಅಂಕಗಳನ್ನು ದಾಖಲಿಸುವ ಬಗ್ಗೆ ಮೇಲ್ವಿಚಾರಣೆ ನಡೆಸುವುದು.
12) ಕಿರು ಪರೀಕ್ಷೆಗಳು, ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್‌ಗಳ ಅಂಕಗಳನ್ನು ಮೌಲ್ಯಮಾಪನದ ನಂತರ 12 ಒಳಗೆ ಎಸ್.ಎ.ಟಿ.ಎಸ್. ಪೋರ್ಟಲ್‌ನಲ್ಲಿ ಇಂಧೀಕರಿಸುವುದು. ಯಾವುದೇ ವಿಳಂಬಕ್ಕೆ ಅವಕಾಶವಿರುವುದಿಲ್ಲ.
13) 2023-24ನೇ ಸಾಲಿನಿಂದಲೇ ಪ್ರಥಮ & ದ್ವಿತೀಯ ಪಿಯುಸಿ ತರಗತಿಗಳಿಗೆ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ನೀಡುವ ಪದ್ಧತಿಯನ್ನು ಅನುಸರಿಸುವುದು.
14) 2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳನ್ನು (Regular) ಹೊರತುಪಡಿಸಿ ಹಿಂದಿನ ಸಾಲಿನ ವಿದ್ಯಾರ್ಥಿಗಳು ಅಂದರೆ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡ (Private students) ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಪದ್ಧತಿ ಅನ್ವಯಿಸುವುದಿಲ್ಲ. ಅಂದರೆ ಆ ವಿದ್ಯಾರ್ಥಿಗಳು 100 ಅಂಕದ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾಗುತ್ತದೆ.
15) ವಿದ್ಯಾರ್ಥಿಯು ಅನಿವಾರ್ಯ ಕಾರಣದಿಂದ ಕಾಲೇಜು ಬದಲಾವಣೆ ಮಾಡಿಕೊಂಡ ಸಂದರ್ಭದಲ್ಲಿ, ಖಾಸಗಿಯಾಗಿ ಅಭ್ಯಾಸ ಮಾಡುವ (Private study) ವಿಷಯವನ್ನೂ ಸಹ ಆಂತರಿಕ ಮೌಲ್ಯಮಾಪನ ಪದ್ಧತಿಗೆ (20:80) ಒಳಪಡಿಸುವುದು. ಸದರಿ ಕಾಲೇಜುಗಳ ಪ್ರಾಂಶುಪಾಲರು ಮೌಲ್ಯಮಾಪನಕ್ಕೆ ಸೂಕ್ತ ವ್ಯವಸ್ಥೆ ಮಾಡುವುದು.
16) ಆಂತರಿಕ ಮೌಲ್ಯಮಾಪನದಿಂದ ನೀಡುವ 20 ಅಂಕಗಳನ್ನು ಎಸ್.ಎ.ಟಿ.ಎಸ್. ನಿಂದ ನೇರವಾಗಿ ಫಲಿತಾಂಶ ಪ್ರಕಟಣೆಗೆ ಪರಿಗಣಿಸುವುದರಿಂದ ನಿಗದಿತ ಸಮಯದೊಳಗೆ ಅಂಕಗಳನ್ನು ದಾಖಲಿಸುವುದು. ಒಂದು ವೇಳೆ ನಿಗದಿತ ಸಮಯದೊಳಗೆ ಆಂತರಿಕ ಅಂಕಗಳನ್ನು ಎಸ್.ಎ.ಟಿ.ಎಸ್. ಪೋರ್ಟಲ್ ನಲ್ಲಿ ದಾಖಲಿಸದಿದ್ದಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
17) ಆಂತರಿಕ ಮೌಲ್ಯಮಾಪನ ಮಾಡುವ ವಿಧಾನಗಳ ಬಗ್ಗೆ ಮಾರ್ಗದರ್ಶಿ ಕೈಪಿಡಿ, 80 ಅಂಕಗಳಿಗೆ ಸರಿ ಹೊಂದುವ ನೀಲ ನಕ್ಷೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ(ಕೆ.ಎಸ.ಇ.ಎ.ಬಿ.)ಯಿಂದ ಕ್ರಮ ತೆಗೆದುಕೊಳ್ಳುವುದು.
18) ಮೇಲಿನ ಎಲ್ಲಾ ಅಂಶಗಳ ಆಧಾರದ ಮೇಲೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಷಯಗಳಲ್ಲಿ ಆಂತರಿಕ ಅಂಕಗಳನ್ನು ನಿಗದಿಪಡಿಸಲಾಗಿದೆ.