LOCAL NEWS : ಅಂಗನವಾಡಿ ಮಕ್ಕಳಿಗೆ ಅದ್ಧೂರಿ ಬೀಳ್ಕೊಡುಗೆ: ಕುದುರಿಮೋತಿಯಲ್ಲಿ ‘ಅಕ್ಷರಾಭ್ಯಾಸ’ದೊಂದಿಗೆ ಶಾಲಾ ಪ್ರವೇಶಕ್ಕೆ ಶುಭಾರಂಭ
PV NEWS ಕನ್ನಡ 24×7 :
ಕುಕನೂರು, ಜು 17 (PV NEWS) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಿಕೆ ಟಾಟಾ ಟ್ರಸ್ಟ್‌ಗಳ ಸಂಯುಕ್ತ ಆಶ್ರಯದಲ್ಲಿ ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಕುದುರಿಮೋತಿ ಗ್ರಾಮದಲ್ಲಿ ಅಂಗನವಾಡಿಯಲ್ಲಿ ಮೂರು ವರ್ಷಗಳ ಶಾಲಾ ಪೂರ್ವ ಶಿಕ್ಷಣ ಪೂರ್ಣಗೊಳಿಸಿ ಒಂದನೇ ತರಗತಿಗೆ ಪ್ರವೇಶ ಪಡೆಯುತ್ತಿರುವ 60 ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಗಣ್ಯ ಅತಿಥಿಗಳಿಂದ ಅಕ್ಷರಾಭ್ಯಾಸ ಮಾಡಿಸಲಾಯಿತು. ಶಾಲಾ ಪೂರ್ವ ಶಿಕ್ಷಣದ ಅವಧಿಯಲ್ಲಿ ಮಕ್ಕಳು ಕಲಿತಿದ್ದ ಆಕಾರಗಳು, ಬಣ್ಣಗಳು, ಅಂಕಿಗಳು, ಬಣ್ಣಗಳ ವರ್ಗೀಕರಣ, ಶಿಶುಗೀತೆಗಳು, ಚಿಕ್ಕದು–ದೊಡ್ಡದು, ವಿವಿಧ ದೈಹಿಕ ಹಾಗೂ ಬೌದ್ಧಿಕ ಚಟುವಟಿಕೆಗಳನ್ನು ಮಕ್ಕಳು ವೇದಿಕೆಯ ಮೇಲೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಕಲಿಕೆ ಟಾಟಾ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಅಶೋಕ್ ಅವರು, ಶಾಲಾ ಪೂರ್ವ ಶಿಕ್ಷಣವು ಮಕ್ಕಳ ಭವಿಷ್ಯದ ಭದ್ರ ಬುನಾದಿಯಾಗಿದ್ದು, ಚಟುವಟಿಕೆ ಆಧಾರಿತ ಕಲಿಕೆಯ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಕಲಿಕೆಯ ಆಸಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ಜಿಲ್ಲಾ ನಿರೂಪಣಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದೇಶ ಮಾಳೆಕೊಪ್ಪ ಮಾತನಾಡಿ, ‘ಮೂರು ವರ್ಷಗಳ ಕಾಲ ಅಂಗನವಾಡಿಯಲ್ಲಿ ಕಲಿತ ಕೌಶಲ್ಯಗಳನ್ನು ಮಕ್ಕಳು ವೇದಿಕೆಯ ಮೇಲೆ ಪ್ರದರ್ಶಿಸಿರುವುದು ಶಾಲಾ ಪೂರ್ವ ಶಿಕ್ಷಣದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಮಕ್ಕಳಿಗೆ ಪದವೀಧರರ ಘಟಿಕೋತ್ಸವದ ಮಾದರಿಯಲ್ಲಿ ಸಮವಸ್ತ್ರ ಧರಿಸಿ ಬೀಳ್ಕೊಟ್ಟಿರುವುದು ಪಾಲಕರಲ್ಲಿ ಸಂತಸ ಮೂಡಿಸಿತು’ ಎಂದರು.
ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿ, ಇನ್ನು ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ಶಾಲೆಯದ್ದಾಗಿದ್ದು, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶಿಕ್ಷಕರು ಶ್ರಮಿಸಲಿದ್ದಾರೆ ಎಂದು ಹೇಳಿದರು. “ಶಿಲೆಯೊಂದು ನೋವನ್ನು ಸಹಿಸಿದಾಗ ಮಾತ್ರ ಸುಂದರ ಮೂರ್ತಿಯಾಗುತ್ತದೆ” ಎಂಬ ದೃಷ್ಟಾಂತದ ಮೂಲಕ ಮಕ್ಕಳಿಗೆ ನಿರಂತರ ಕಲಿಕೆಯ ಮಹತ್ವವನ್ನು ತಿಳಿಸಿದರು. ಇಂದಿನ ಮಕ್ಕಳು ಕೇಳಿದ ಪ್ರಶ್ನೆಗೆ ಆತ್ಮವಿಶ್ವಾಸದಿಂದ ಉತ್ತರಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿದಿನ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವ ಉತ್ತಮ ಅಭ್ಯಾಸ ರೂಢಿಸಿಕೊಂಡಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಸಭೆಯಲ್ಲಿ ಪಾಲಕರಿಗೂ ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸುವಂತೆ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮಾಧವಿ ವೈದ್ಯ ಅವರು ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ಶಕುಂತಲಾ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ, ಬಾಲ ವಿಕಾಸ ಸಮಿತಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಹಿರಿಯ ಮೇಲ್ವಿಚಾರಕರು, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಕುದುರಿಮೋತಿ ಗ್ರಾಮದ ಹಿರಿಯರು, ಪಾಲಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.