PV NEWS : ಕುಕನೂರು|ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8ರವರೆಗೆ ಅವಕಾಶ : ವಿವರ ಸಲ್ಲಿಸಲು ಬಿಎಲ್‌ಒ ಅಥವಾ ಪ.ಪಂ. ಕಚೇರಿಯನ್ನು ಸಂಪರ್ಕಿಸುವಂತೆ ಮುಖ್ಯಾಧಿಕಾರಿ ನಾಗೇಶ್ ಮನವಿ!
PV NEWS ಕನ್ನಡ 24×7 | ಸ್ಥಳೀಯ ಸುದ್ದಿ:
ಕುಕನೂರು, ಜು. 28 (PV NEWS ಕನ್ನಡ 24×7): ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಹಾಗೂ ಮತದಾರರ ವಿವರಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಅರ್ಹ ಮತದಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಈ ಹಿಂದೆ ಒಟ್ಟು 15,388 ಮತದಾರರು ನೋಂದಣಿಯಾಗಿದ್ದು, 2026ರ ಜೂನ್ 30ರಿಂದ ಇದುವರೆಗೆ 12,811 ಮತದಾರರ ವಿವರಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉಳಿದ 2,577 ಮತದಾರರನ್ನು ಅನುಪಸ್ಥಿತ (Absent), ಸ್ಥಳಾಂತರಗೊಂಡ (Shifted), ಮರಣ ಹೊಂದಿದ (Death), ನಕಲಿ (Duplicate) ಹಾಗೂ ಇತರೆ (ASDDO) ವರ್ಗಗಳಲ್ಲಿ ಗುರುತಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಇನ್ನೂ ಎಣಿಕೆ ನಮೂನೆ (Enumeration Form) ಪಡೆದುಕೊಳ್ಳದವರು ಅಥವಾ ಭರ್ತಿ ಮಾಡಿ ಸಲ್ಲಿಸದವರು ಕೂಡಲೇ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಬೇಕು. ಅಗತ್ಯವಿದ್ದಲ್ಲಿ ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ನೀಡಿ ನಮೂನೆ ಪಡೆದು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಹೊರವೂರಿಗೆ ತೆರಳಿ ಈಗ ಮರಳಿರುವ ಮತದಾರರಿಗೂ ತಮ್ಮ ವಿವರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 8ರವರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ನಾಗೇಶ್ ಮನವಿ ಮಾಡಿದ್ದಾರೆ.
ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಲುಪಿಸಿರುವ ಅವರು, ತಮ್ಮ ಹೆಸರು ಮತ್ತು ವಿವರಗಳನ್ನು ಸರಿಯಾಗಿ ದಾಖಲಿಸಲು ತಕ್ಷಣವೇ ಬಿಎಲ್‌ಒ ಅಥವಾ ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
— ವರದಿ: PV NEWS ಕನ್ನಡ 24×7 (ಇದು ಪ್ರಜೆಗಳ ಪರ ಹದ್ದಿನ ಕಣ್ಣು)