BREAKING : ಹುಬ್ಬಳ್ಳಿ |ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ ಜೋಶಿ ವಿರುದ್ಧ ಎಫ್‌ಐಆರ್!

PV NEWS ಕನ್ನಡ 24×7 :
ಧಾರವಾಡ, ಆ.8: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ ಜೋಶಿ ವಿರುದ್ಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆ ಎನ್ನಲಾದ ಮಹಿಳೆ ಆ.6ರಂದು ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 75(2) ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, 2022ರ ಮೇ 29ರಂದು ಧಾರವಾಡ ನಗರದ ಮಾಳಮಡ್ಡಿಯಲ್ಲಿರುವ ‘ಶ್ರೀ ಪೂರ್ಣ ಅಪಾರ್ಟ್‌ಮೆಂಟ್’ನಲ್ಲಿ ಗೋಪಾಲ ಜೋಶಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಅಥವಾ ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯ ಬಳಿಕ ಭಯದಿಂದಾಗಿ ತಕ್ಷಣ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗಿರಲಿಲ್ಲ. ನಂತರ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದು, ಅವರ ಸಲಹೆಯ ಮೇರೆಗೆ ಇದೀಗ ಪೊಲೀಸರಿಗೆ ದೂರು ನೀಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ವಿದ್ಯಾಗಿರಿ ಠಾಣೆ ಪೊಲೀಸರು ಘಟನೆ ನಡೆದ ಸ್ಥಳ, ದೂರುದಾರೆಯ ಹೇಳಿಕೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

ಹಿಂದೆಯೂ ವಂಚನೆ ಆರೋಪ..!
ಗೋಪಾಲ ಜೋಶಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ. 2024ರ ಅಕ್ಟೋಬರ್‌ನಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ₹2 ಕೋಟಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವೂ ತನಿಖಾ ಹಂತದಲ್ಲಿದೆ.
