PV NEWS : ಕೊಪ್ಪಳ | ಮಹಿಳಾ ಶೋಷಣೆ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಕಲ್ಯಾಣಿ
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ; ಸಮಾನತೆಗಾಗಿ ಒಗ್ಗಟ್ಟಿನ ಹೋರಾಟಕ್ಕೆ ಕರೆ!
PV NEWS ಕನ್ನಡ 24×7 |
ಕೊಪ್ಪಳ, ನ.05 : ಖಾಸಗಿ ಆಸ್ತಿಯ ಉಗಮದೊಂದಿಗೆ ಮಹಿಳೆಯರ ಶೋಷಣೆ ಆರಂಭವಾಯಿತು. ಪುರುಷ ಪ್ರಧಾನ ಮನೋಭಾವ, ಮಹಿಳೆಯರನ್ನು ಭೋಗದ ವಸ್ತುವಿನಂತೆ ಬಿಂಬಿಸುವ ಪ್ರವೃತ್ತಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅಶ್ಲೀಲ ಚಿತ್ರಣಗಳು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಾರಣವಾಗುತ್ತಿವೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್ಎಸ್) ರಾಜ್ಯ ಸೆಕ್ರೆಟರಿಯೇಟ್ ಸದಸ್ಯೆ ಕಲ್ಯಾಣಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಎಐಎಂಎಸ್ಎಸ್ ಜಿಲ್ಲಾ ಸಂಘಟನಾ ಸಮಿತಿ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಮೇಲಿನ ಶೋಷಣೆ ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಸಂಘಟಿತ ಹೋರಾಟ ಅಗತ್ಯ. ಅಶ್ಲೀಲ ಸಿನಿಮಾ, ಸಾಹಿತ್ಯ ಹಾಗೂ ನೀಲಿ ಚಿತ್ರಗಳು ಮಹಿಳೆಯರನ್ನು ಭೋಗದ ವಸ್ತುವಿನಂತೆ ಬಿಂಬಿಸುತ್ತಿವೆ. ಇಂತಹ ಸಾಂಸ್ಕೃತಿಕ ಅಧಃಪತನದ ವಿರುದ್ಧ ಮಹಿಳೆಯರು ಒಗ್ಗೂಡಿ ಹೋರಾಡಬೇಕು. ಅನ್ಯಾಯದ ವಿರುದ್ಧ ಮಹಿಳೆಯರನ್ನು ಸಂಘಟಿಸುವ ಕಾರ್ಯವನ್ನು ಎಐಎಂಎಸ್ಎಸ್ ದೇಶದಾದ್ಯಂತ ನಡೆಸುತ್ತಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಮಹಿಳೆಯರನ್ನು ಒಂದೆಡೆ ಪೂಜಿಸಿ, ಮತ್ತೊಂದೆಡೆ ಅವಮಾನಿಸುವುದು ಸಮಾಜದ ವೈರುಧ್ಯವಾಗಿದೆ. ಮಹಿಳೆಯರು ಸದಾ ಪುರುಷರ ರಕ್ಷಣೆಯಲ್ಲಿಯೇ ಇರಬೇಕು ಎಂಬ ಮನುವಾದಿ ಚಿಂತನೆಯಿಂದ ಹೊರಬಂದು ಸ್ವತಂತ್ರ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾನತೆ ಮತ್ತು ತಾರತಮ್ಯರಹಿತ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಸಂಘಟಿತರಾಗಬೇಕು. ಈ ಹೋರಾಟದಲ್ಲಿ ಪುರುಷರೂ ಮಹಿಳೆಯರ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಎಐಎಂಎಸ್ಎಸ್ ಜಿಲ್ಲಾ ಸಂಘಟನಾ ಸಮಿತಿ ಅಧ್ಯಕ್ಷೆ ಮಂಜುಳಾ ಮಜ್ಜಿಗಿ ಮಾತನಾಡಿ, ನಿರ್ಭಯಾ, ಆಸಿಫಾ, ಬಿಲ್ಕಿಸ್ ಬಾನು, ಅಂಕಿತ ಭಂಡಾರಿ ಹಾಗೂ ಸೌಜನ್ಯ ಅವರಂತಹ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಸಮಾಜವನ್ನು ಕಳವಳಗೊಳಿಸಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಸಾಣಾಪುರ ಕೆರೆ ಸೇರಿದಂತೆ ವಿವಿಧೆಡೆ ನಡೆದ ಘಟನೆಗಳು ಆತಂಕ ಮೂಡಿಸಿವೆ ಎಂದು ಹೇಳಿದರು.
ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಶಾರದಾ ಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ರಾಜ್ಯ ಸೆಕ್ರೆಟರಿಯೇಟ್ ಸದಸ್ಯೆ ವಿಜಯಲಕ್ಷ್ಮಿ, ಸಮಿತಿ ಸದಸ್ಯ ಹುಸೇನ್ ಬಿ, ವಿವಿಧ ಗ್ರಾಮಗಳ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.