FLASH NEWS : “ಪತ್ರಕರ್ತರ ಹಿತರಕ್ಷಣಾ ಕಾಯ್ದೆ” ಜಾರಿ ಆಗಬೇಕು : ಕನಿಪಾ ಧ್ವನಿ ತಾಲೂಕಾ ಅಧ್ಯಕ್ಷ ಚಂದ್ರು ಆರ್ ಭಾನಾಪುರ್
ಇಂದು ಬೆಳಗಾವಿಯ “ಸುವರ್ಣಸೌಧ ಚಲೋ” ಚಳುವಳಿ : ಪತ್ರಕರ್ತರ ರಕ್ಷಣೆಗಾಗಿ ಈ ಹೋರಾಟ..!!
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರ : ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ನೀಡಲು ಸರ್ಕಾರ ಹೊರಡಿಸಿರುವ ಆದೇಶದಲ್ಲಿನ 5 ಕಠಿಣ ಮಾನದಂಡಗಳನ್ನು ಸರಳೀಕರಣ ಗೊಳಿಸಬೇಕು. ಪತ್ರಕರ್ತರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಪ್ರಮುಖ 12 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಇಂದು ಬೆಳಗಾವಿಯ ಸುವರ್ಣಸೌಧದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತಾಲ್ಲೂಕ ಅಧ್ಯಕ್ಷ ಚಂದ್ರು ಆರ್ ಭಾನಾಪುರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ರಾಜ್ಯದ 16 ಸಾವಿರ ಪತ್ರಕರ್ತರಿಗೆ ಸರ್ಕಾರ ಉಚಿತವಾಗಿ ಸಂಚರಿಸುವುದಕ್ಕೆ ಬಸ್ ಪಾಸ್ ನೀಡಲು ನಡೆಸಿದ ಹೋರಾಟದ ಫಲವಾಗಿ ವಾರ್ತಾ ಇಲಾಖೆ ಕಠಿಣ ನಿಯಮಗಳನ್ನು ರೂಪಿಸಿದ್ದು, ತಾಲ್ಲೂಕು ಮಟ್ಟದ ಯಾವೊಬ್ಬ ಪತ್ರಕರ್ತರಿಗೂ ಬಸ್‌ಪಾಸ್ ದೊರೆಯುವುದು ಗಗನ ಕುಸುಮವಾಗಿದೆ. ಈ ನಿಟ್ಟಿನಲ್ಲಿ ಬಸ್‌ಪಾಸ್‌ಗೆ ವಿಧಿಸಿರುವ ಕಠಿಣ ಷರತ್ತುಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಿ.ಆರ್.ಜಿ.ಐ ಹಾಗೂ ಆರ್.ಎನ್.ಐ. ಹೊಂದಿರುವ ಪತ್ರಕರ್ತರಿಗೆ ವಿಕಾಸ ಸೌಧ, ವಿಧಾನಸೌಧಕ್ಕೆ ಪ್ರವೇಶಿಸಲು ಮುಕ್ತ ಅವಕಾಶ ನೀಡಬೇಕು, ಜಿಲ್ಲಾ ವ್ಯಾಪ್ತಿಯಲ್ಲಿರುವ ಪತ್ರಿಕಾ ಭವನಗಳನ್ನು ಯಾವೊಂದು ಪತ್ರಿಕಾ ಸಂಘಟನೆಗಳಿಗೆ ನೀಡದೇ ಆಯಾ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳ ಮೂಲಕ ನಿರ್ವಹಣೆಗೆ ಆದೇಶಿಸಬೇಕು. ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 300ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಪತ್ರಕರ್ತರಿಗೆ ಜೀವ ವಿಮೆ ಸೌಲಭ್ಯ ಸರ್ಕಾರ ಒದಗಿಸಬೇಕು.ಕೆಲವು ಪೊಲೀಸರಿಂದ ಪತ್ರಕರ್ತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು. ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೀರಯ್ಯ ವ್ಹಿ ಹಿರೇಮಠ್ ಮಾತನಾಡಿ, ‘ಪತ್ರಕರ್ತರು ಕರ್ತವ್ಯದ ಸಮಯದಲ್ಲಿ ಅಪಘಾತ, ಸಹಜವಾಗಿ ಮೃತಪಟ್ಟರೆ ಅವರ ಅವಲಂಬಿತರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ವಾರ, ಪಾಕ್ಷಿಕ, ಮಾಸ ಹಾಗೂ ಇನ್ನಿತರ ಪತ್ರಿಕೆಗಳ ಪ್ರತಿನಿಧಿಗಳು ಮಾಶಾಸನ ಪಡೆಯಲು ಅರ್ಹತೆ ಹೊಂದಿರುವುದಿಲ್ಲವೆಂದು ವಾರ್ತಾ ಇಲಾಖೆ ಹೊರಡಿಸಿರುವ ಅವೈಜ್ಞಾನಿಕ ನಿಬಂಧನೆ ಕೈ ಬಿಡಬೇಕು. ಪತ್ರಕರ್ತರಿಗೆ ಉಚಿತ ಟೋಲ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷ ಸುನೀಲ್ ಕುಮಾರ್ ಮಠದ್, ಗೌರವ ಅಧ್ಯಕ್ಷ ಮಹೇಶ್ ಕಲ್ಮಠ, ವೀರಯ್ಯ ಕುರ್ತಕೋಟಿ, ಭೀಮಾಶಂಕರ ಪಾಣೇಗಾಂವ್, ವಿಶ್ವನಾಥ್ ಪಟ್ಟಣಶೆಟ್ಟಿ, ಮುತ್ತು ತೋಂಟದಾರ್ಯಮಠ, ಮಲ್ಲಯ್ಯ ಗದಗಿನ, ಅಲ್ಲಾಬೇಗಂ ಅಮರಾವತಿ ಇನ್ನಿತರರು ಇದ್ದರು.