PV NEWS : ಕೊಪ್ಪಳ | ಸ್ವಂತ ಉದ್ಯಮ ಆರಂಭಿಸಲು ಉಚಿತ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ!
PV NEWS ಕನ್ನಡ 24×7 |
ಕೊಪ್ಪಳ, ಆ. 12 : ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಜಿಲ್ಲೆಯ ಯುವಜನರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕೊಪ್ಪಳ ವತಿಯಿಂದ 10 ದಿನಗಳ ಉಚಿತ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸ್ವಂತ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಉದ್ಯಮ ಆರಂಭಿಸುವ ಹಂತಗಳು, ಉದ್ಯಮಶೀಲತೆಯ ಕುರಿತು ಪ್ರೇರಣೆ, ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು, ಸ್ವಯಂ ಉದ್ಯೋಗ ಯೋಜನೆಗಳು ಮತ್ತು ವಿವಿಧ ಸಾಲ ಸೌಲಭ್ಯಗಳ ಕುರಿತು ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತದೆ.
ಇದರೊಂದಿಗೆ ಬ್ಯಾಂಕ್ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಜಾಹೀರಾತು, ಮಾರುಕಟ್ಟೆ ನೋಂದಣಿ ವಿಧಾನ, ಯೋಜನಾ ವರದಿ ಸಿದ್ಧಪಡಿಸುವಿಕೆ ಹಾಗೂ ಉದ್ಯಮ ನಿರ್ವಹಣೆಯ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡಲಾಗುತ್ತದೆ. ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದಕ್ಕೂ ಅವಕಾಶ ಕಲ್ಪಿಸಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಕೊಪ್ಪಳ ಜಿಲ್ಲೆಯ 20ರಿಂದ 45 ವರ್ಷದೊಳಗಿನ, ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದು.
ಅಗತ್ಯ ದಾಖಲೆಗಳು
ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣಪತ್ರದ ಜೆರಾಕ್ಸ್ ಪ್ರತಿ, ಪಡಿತರ ಚೀಟಿ (ರೇಷನ್ ಕಾರ್ಡ್) ಜೆರಾಕ್ಸ್ ಪ್ರತಿ ಹಾಗೂ ಮೂರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕು.
ಆ.17 ಅರ್ಜಿ ಸಲ್ಲಿಸಲು ಕೊನೆಯ ದಿನ
ಆಸಕ್ತ ಅಭ್ಯರ್ಥಿಗಳು ಆಗಸ್ಟ್ 17, 2026ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ, ಕೊಪ್ಪಳ ಆವರಣ, ನಗರಸಭೆ ಎದುರು, ಕೊಪ್ಪಳ ಈ ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ 7204016012 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಿಡಾಕ್‌ನ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.