PV NEWS : ಶಿಕ್ಷಕರ ನೇಮಕಾತಿಗೆ ವಯೋಮಿತಿ ಸಡಿಲಿಕೆ ನೀಡಿ! 15 ಸಾವಿರ ಹುದ್ದೆಗಳಲ್ಲಿ 5 ವರ್ಷ ಸಡಿಲಿಕೆಗೆ ಎಐಡಿವೈಒ–ಜೆಎಎಸ್‌ಸಿ–ಕೆ ಆಗ್ರಹ!
PV NEWS ಕನ್ನಡ 24×7:
ಗಣಿತ, ಹಿಂದಿ, ಉರ್ದು ಸೇರಿದಂತೆ ಅಗತ್ಯ ವಿಷಯಗಳ ಶಿಕ್ಷಕರ ಹುದ್ದೆ ಸೇರ್ಪಡೆಗೆ ಒತ್ತಾಯ
ಕೊಪ್ಪಳ, ಆ.19: ರಾಜ್ಯ ಸರ್ಕಾರದ ಆದೇಶದಂತೆ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಬೇಕು ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗಣಿತ, ಹಿಂದಿ, ಉರ್ದು ಸೇರಿದಂತೆ ಅಗತ್ಯವಿರುವ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಕರ್ನಾಟಕ (ಜೆಎಎಸ್‌ಸಿ–ಕೆ) ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಮುಖ್ಯಮಂತ್ರಿ ಹಾಗೂ ಶಾಲಾ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಸರ್ಕಾರದ ಪ್ರತಿನಿಧಿಯಾಗಿ ಸಚಿವ ಡಾ. ಅಜಯ್ ಸಿಂಗ್ ಅವರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವರು, ರಾಜ್ಯ ಸರ್ಕಾರವು ಜನವರಿ 29ರಂದು ಹೊರಡಿಸಿರುವ ರಾಜ್ಯಪತ್ರದಲ್ಲಿ 2027ರ ಡಿಸೆಂಬರ್ 31ರವರೆಗೆ ನಡೆಯುವ ಎಲ್ಲ ನೇರ ನೇಮಕಾತಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಿರುವುದು ಗಮನಕ್ಕೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬೇಡಿಕೆ ನ್ಯಾಯೋಚಿತವಾಗಿದ್ದು, ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಂಡು ಉದ್ಯೋಗಾಕಾಂಕ್ಷಿಗಳ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗಣಿತ ವಿಷಯದಲ್ಲಿ ಅನುತ್ತೀರ್ಣರಾಗುತ್ತಿರುವ ಮಕ್ಕಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಣಿತ ಶಿಕ್ಷಕರ ಕೊರತೆ ಸೇರಿದಂತೆ ಮನವಿಯಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರದ ಆದೇಶದಂತೆ ಎಲ್ಲ ನೇರ ನೇಮಕಾತಿಗಳಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಬೇಕಿದ್ದರೂ, 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಅದನ್ನು ಅಳವಡಿಸಿಲ್ಲ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದವು. ಟಿಇಟಿ ಉತ್ತೀರ್ಣರಾಗಿರುವ ಹಲವು ಅಭ್ಯರ್ಥಿಗಳು ವಯೋಮಿತಿ ಮೀರುವ ಹಂತದಲ್ಲಿದ್ದು, ಸಡಿಲಿಕೆ ದೊರೆಯದಿದ್ದರೆ ಅರ್ಹ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
2022ರಲ್ಲಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ವಯೋಮಿತಿ ಸಡಿಲಿಕೆ ನೀಡಲಾಗಿತ್ತು. ಇದೇ ಮಾದರಿಯಲ್ಲಿ ಈಗಲೂ ಅರ್ಹ ಅಭ್ಯರ್ಥಿಗಳ ಹಿತದೃಷ್ಟಿಯಿಂದ ವಯೋಮಿತಿ ಸಡಿಲಿಕೆ ಅನ್ವಯಿಸಬೇಕು ಎಂದು ಒತ್ತಾಯಿಸಿದರು.
ಕ್ರೈಸ್ ವಸತಿ ಶಾಲೆಗಳ ಶಿಕ್ಷಕರ ನೇಮಕಾತಿ ಹಾಗೂ ಕೆಪಿಎಸ್‌ಸಿ ನಡೆಸುತ್ತಿರುವ ಕೆಲವು ನೇಮಕಾತಿಗಳಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಆದರೆ ಶಿಕ್ಷಕರ ನೇಮಕಾತಿಯಲ್ಲಿ ಮಾತ್ರ ಸಡಿಲಿಕೆ ನೀಡದಿರುವುದು ತಾರತಮ್ಯವಾಗಿದೆ ಎಂದು ಸಂಘಟನೆಗಳು ಆರೋಪಿಸಿದವು.
11 ವರ್ಷಗಳ ಬಳಿಕ 4,500 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಗಣಿತ, ಹಿಂದಿ, ಉರ್ದು ಸೇರಿದಂತೆ ಹಲವು ವಿಷಯಗಳ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿಯಲ್ಲಿ ಅವುಗಳನ್ನು ಸೇರಿಸಿಲ್ಲ. ಇದರಿಂದ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಹಾಗೂ ಬಿ.ಎಡ್ ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಜಿಪಿಟಿ ಶಿಕ್ಷಕರಿಗೆ ಬಡ್ತಿ ನೀಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲು, ನಿಯಮಾನುಸಾರ ಅಗತ್ಯವಿರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಎಐಡಿವೈಒ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್ ಮಾತನಾಡಿ, “ಮಾನವೀಯ ದೃಷ್ಟಿಯಿಂದ ರಾಜ್ಯ ಸರ್ಕಾರದ ಆದೇಶದಂತೆ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಬೇಕು. ಮಕ್ಕಳ ಕಲಿಕೆಯ ಹಿತದೃಷ್ಟಿಯಿಂದ ಗಣಿತ, ಹಿಂದಿ, ಉರ್ದು ಸೇರಿದಂತೆ ಅಗತ್ಯವಿರುವ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ನೇಮಕಾತಿಯಲ್ಲಿ ಸೇರಿಸಬೇಕು” ಎಂದು ಒತ್ತಾಯಿಸಿದರು.
ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ, ರಾಜ್ಯ ಉಪಾಧ್ಯಕ್ಷ ವಿನಯ ಸಾರಥಿ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕ ಭವಾನಿ ಶಂಕರ್ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಉದ್ಯೋಗಾಕಾಂಕ್ಷಿಗಳಾದ ಲಕ್ಷ್ಮಿ ರೆಡ್ಡಿ, ವೆಂಕಟಯ್ಯ, ಅಬ್ದುಲ್ ಭಾಷಾ ಪಟೇಲ್, ಸರೋಜಾ, ಎಲ್ಲಪ್ಪ ದೊರೆ, ಪರಶುರಾಮ್, ಜಗದೀಶ್ ನೇಮಕಲ್, ರಣಜಿತ್, ಜಯಣ್ಣ ಹಾಗೂ ಕಲಾವತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.