PV NEWS ಕನ್ನಡ 24×7 | ಕುಕನೂರು, ಆ. 26 : ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ ಹೇಳಿದರು.
ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲಿಸಲಾಯಿತು. ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಯೋಜನೆಗಳ ಸೌಲಭ್ಯದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ
ಗೃಹಲಕ್ಷ್ಮೀ ಯೋಜನೆಯಡಿ ದೊರೆಯುತ್ತಿರುವ ಆರ್ಥಿಕ ನೆರವು ಗ್ರಾಮೀಣ ಮಹಿಳೆಯರಿಗೆ ಕುಟುಂಬದ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಅವರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿದೆ ಎಂದು ಸಂಗಮೇಶ್ ಗುತ್ತಿ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು, ಫಲಾನುಭವಿಗಳ ಅರ್ಜಿ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವುದು ಹಾಗೂ ಅರ್ಹರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಯೋಜನೆಗಳ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎದುರಾಗುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಶೀಘ್ರವಾಗಿ ಪರಿಹರಿಸುವಂತೆ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರು ಅಗತ್ಯ ಮಾಹಿತಿ ಪಡೆದುಕೊಂಡು, ಅರ್ಹತೆ ಹೊಂದಿರುವವರು ಯೋಜನೆಗಳ ಸೌಲಭ್ಯ ಪಡೆಯಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಂಪರ್ಕಿಸುವಂತೆ ಸಮಿತಿ ವತಿಯಿಂದ ಮನವಿ ಮಾಡಲಾಯಿತು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿ ಬೆಟದಪ್ಪ ಮಾಳೆಕೊಪ್ಪ, ತಾಪಂ ಯೋಜನಾಧಿಕಾರಿ ಆನಂದ ಗರೂರ, ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.