PV NEWS : ಎಸ್‌ಐಆರ್ ಕುರಿತು ವಿಶೇಷ ಗ್ರಾಮಸಭೆ : ಅರ್ಹರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಅನರ್ಹರ ಹೆಸರು ಕೈಬಿಡುವ ಕುರಿತು ಮಾಹಿತಿ!
PV NEWS ಕನ್ನಡ 24×7|
ಕುಷ್ಟಗಿ, ಆ. 25: ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಕುರಿತು ವಿಶೇಷ ಗ್ರಾಮಸಭೆ ನಡೆಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಡು ಮತದಾರರ ಪಟ್ಟಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಕರಡು ಮತದಾರರ ಪಟ್ಟಿಯ ವಿವರಗಳನ್ನು ಓದಿ ತಿಳಿಸಲಾಯಿತು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅರ್ಹರಾಗಿರುವವರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು, ಈಗಾಗಲೇ ಪಟ್ಟಿಯಲ್ಲಿರುವ ಮತದಾರರ ಹೆಸರು ಅಥವಾ ಇತರೆ ವಿವರಗಳಲ್ಲಿ ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳುವುದು ಹಾಗೂ ಅನರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹರ ಹೆಸರುಗಳು ಮುಂದುವರಿಯದಂತೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಪಂ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.