PV ನ್ಯೂಸ್ ಡೆಸ್ಕ್- ಕುಕನೂರು : ‘ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ ಬೆಳೆ ಉತ್ಪಾದಕತೆ ಮತ್ತು ರೈತರ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ರೈತರಿಗೆ ವರದಾನವಾಗಿದೆ. ಈ ತಾಲೂಕಿನ ಎಲ್ಲಾ ರೈತರು ಈ ಯೋಜನೆ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಉಪ ಕೃಷಿ ನಿರ್ದೇಶಕ ಸಹದೇವ ಯರಗೋಪ್ಪ ತಿಳಿಸಿದರು.
ಇಂದು ಕುಕನೂರ ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಗಂಗಾವತಿ, ಇದರ ವತಿಯಿಂದ ಆಯೋಜಿಸಿದ್ದು, “ಕೃಷಿ ಭಾಗ್ಯ ಯೋಜನೆಯ ಪ್ಯಾಕೇಜ್ ಮಾದರಿ ಅಳವಡಿಕೆ” ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘2023-24ನೇ ಸಾಲಿನಲ್ಲಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಮಳೆಯಾಶ್ರಿತ ಕೃಷಿ ನೀತಿ, 2014ರನ್ವಯ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರ ಆಡಳಿತ ಮಂಡಳಿ ಸದಸ್ಯ ತಿಮ್ಮಣ್ಣ ಚೌಡಿ, ಪ್ರಗತಿಪರ ರೈತ ಸೋಮಪ್ಪ ಭೀಮರಡ್ಡಿ , ಕೆ.ವಿ.ಕೆ ಕೀಟಶಾಸ್ತ್ರಜ್ಞರು ಬಸವರಾಜ ಕಾಡಣ್ಣವರ, ಚಂದ್ರಕಾಂತ ನಾಡಗೌಡ್ರು ಸಹಾಯಕ ಕೃಷಿ ನಿರ್ದೇಶಕ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಗಂಗಾವತಿ ಕೃಷಿ ಅಧಿಕಾರಿಗಳು,ಸಹಾಯಕ ಕೃಷಿ ಅಧಿಕಾರಿಗಳು, ಆತ್ಮ, ಸಂಜೀವಿನಿ ಸಿಬ್ಬಂದಿಗಳು ಹಾಗೂ ತಳಕಲ್ಲ ಗ್ರಾಮದ ಪ್ರಗತಿಪರ ರೈತರು ಉಪಸ್ಥಿತರಿದ್ದರು.