PV NEWS : ತಳಕಲ್‌ನಲ್ಲಿ ಉಪ ಅಂಚೆ ಕಚೇರಿ ಆರಂಭ: ₹50 ಲಕ್ಷದ ನೂತನ ಕಟ್ಟಡದ ಭರವಸೆ ನೀಡಿದ ಸಂಸದ ಹಿಟ್ನಾಳ್
ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅಂಚೆ ಸೇವೆ ಸುಲಭ; ₹50 ಲಕ್ಷದ ಕಟ್ಟಡ ನಿರ್ಮಾಣದ ಭರವಸೆ
ಕುಕನೂರು, ಸೆ. 04 : ಕೊಪ್ಪಳ ಜಿಲ್ಲೆಯ ತಡಕಲ್ ಗ್ರಾಮದಲ್ಲಿದ್ದ ಶಾಖಾ ಅಂಚೆ ಕಚೇರಿಯನ್ನು ಉಪ ಅಂಚೆ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಭಾರತೀಯ ಅಂಚೆ ಇಲಾಖೆ ಹಾಗೂ ಕೊಪ್ಪಳ ಅಂಚೆ ವಿಭಾಗದ ವತಿಯಿಂದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ರಾಜಶೇಖರ ಬಿ. ಹಿಟ್ನಾಳ್ ಅವರು ಕಚೇರಿಯನ್ನು ಉದ್ಘಾಟಿಸಿದರು.
ತಡಕಲ್ ಸುತ್ತಮುತ್ತಲಿನ ನಾಲ್ಕೈದು ಶಾಖಾ ಅಂಚೆ ಕಚೇರಿಗಳು ಈ ಹಿಂದೆ ಭಾಗ್ಯನಗರದ ಉಪ ಅಂಚೆ ಕಚೇರಿಯನ್ನು ಅವಲಂಬಿಸಿದ್ದವು. ದೂರದ ಕಾರಣ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗಮನಿಸಿ ತಡಕಲ್‌ನಲ್ಲಿ ಉಪ ಅಂಚೆ ಕಚೇರಿ ಆರಂಭಿಸಲಾಗಿದೆ ಎಂದು ಹಿಟ್ನಾಳ್ ಹೇಳಿದರು.
ಅಂಚೆ ಇಲಾಖೆಯು ಪತ್ರ ವ್ಯವಹಾರದ ಜತೆಗೆ ಬ್ಯಾಂಕಿಂಗ್, ವಿಮೆ, ಉಳಿತಾಯ ಯೋಜನೆಗಳು, ಹಣಕಾಸು ವಹಿವಾಟು, ಆಧಾರ್ ಹಾಗೂ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತಿದೆ. ಸಾರ್ವಜನಿಕರು ಈ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
₹50 ಲಕ್ಷದ ಕಟ್ಟಡ
ಕೊಪ್ಪಳ ಅಂಚೆ ವಿಭಾಗದಲ್ಲಿ 184 ಶಾಖಾ ಅಂಚೆ ಕಚೇರಿಗಳು ಹಾಗೂ 37 ಉಪ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹಿಟ್ನಾಳ್ ತಿಳಿಸಿದರು. ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸಿಎಸ್‌ಆರ್ ಹಾಗೂ ಸರ್ಕಾರಿ ಅನುದಾನ ಬಳಸಲಾಗುತ್ತಿದೆ.
ತಡಕಲ್‌ನಲ್ಲಿ ಉಪ ಅಂಚೆ ಕಚೇರಿಗೆ ಸೂಕ್ತ ಜಾಗ ದೊರೆತರೆ ಸುಮಾರು ₹50 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ
ಡಿಜಿಟಲ್ ವಹಿವಾಟಿನ ಸಂದರ್ಭದಲ್ಲಿ ಸೈಬರ್ ವಂಚನೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅಪರಿಚಿತರಿಂದ ಬರುವ ಕರೆಗಳು, ಅನುಮಾನಾಸ್ಪದ ಲಿಂಕ್‌ಗಳು ಹಾಗೂ ಒಟಿಪಿ ಕೇಳುವ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು. ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಅಪರಿಚಿತರಿಗೆ ನೀಡಬಾರದು ಎಂದು ಹಿಟ್ನಾಳ್ ಸಲಹೆ ನೀಡಿದರು.
ಮೂಲಸೌಕರ್ಯ ಅಭಿವೃದ್ಧಿ ಪ್ರಸ್ತಾಪ..!
ಕಾರ್ಯಕ್ರಮದಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿ ವಿಷಯಗಳನ್ನೂ ಹಿಟ್ನಾಳ್ ಪ್ರಸ್ತಾಪಿಸಿದರು. ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಅಗತ್ಯ ಸಮೀಕ್ಷೆ ಹಾಗೂ ಡಿಪಿಆರ್ ಸಿದ್ಧಪಡಿಸುವಂತೆ ಪಿಡಬ್ಲ್ಯೂಡಿ ಇಲಾಖೆಗೆ ಸೂಚಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ ಎಂದು ಅವರು ತಿಳಿಸಿದರು.
ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ದೊರೆಯಲಿದೆ ಎಂದು ಹೇಳಿದ ಅವರು, ಇದರಿಂದ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಹೆಚ್ಚಲಿದೆ ಎಂದರು.
ಮಳೆ ಕೊರತೆ ಮತ್ತು ನೀರಿನ ಲಭ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ ತೋಟಗಾರಿಕೆ ಹಾಗೂ ಸಾವಯವ ಕೃಷಿಗೆ ರೈತರು ಆದ್ಯತೆ ನೀಡಬೇಕು. ಈ ಬೆಳೆಗಳಿಗೆ ಮಾರುಕಟ್ಟೆ ಹಾಗೂ ರಫ್ತು ಅವಕಾಶಗಳಿವೆ ಎಂದು ಅವರು ಹೇಳಿದರು.
ಅಂಚೆ ಇಲಾಖೆಯ ಸೇವೆ ಬಳಕೆಗೆ ಮನವಿ…!
ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ನಾಯಕ ಉದಯ ರಾಯರೆಡ್ಡಿ, ಅಂಚೆ ಇಲಾಖೆ ಹಲವು ವರ್ಷಗಳಿಂದ ದೇಶದ ವಿವಿಧ ಭಾಗಗಳ ಜನರನ್ನು ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಅಂಚೆ ಇಲಾಖೆಯ ಪಿಪಿಎಫ್, ಟೈಮ್ ಡೆಪಾಸಿಟ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಕಿಸಾನ್ ವಿಕಾಸ್ ಪತ್ರ ಹಾಗೂ ಸುಕನ್ಯಾ ಸಮೃದ್ಧಿ ಸೇರಿದಂತೆ ವಿವಿಧ ಉಳಿತಾಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಮುಂಡರಗಿ, ಹುಲಿಗಿ, ಅಲವಂಡಿ, ತಳಕಲ್, ಕುಕನೂರು ಹಾಗೂ ಕಣಗಿಹಾಳದಲ್ಲಿ ಉಪ ಅಂಚೆ ಕಚೇರಿಗಳ ಮಂಜೂರಾತಿಗೆ ಸಂಸದರು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದರು.
ತಡಕಲ್ ಉಪ ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಸಿಎಸ್‌ಆರ್ ಅಥವಾ ಸಂಸದರ ಅನುದಾನ ಬಳಸುವಂತೆ ಅವರು ಮನವಿ ಮಾಡಿದರು. ಕುಕನೂರಿನ ಅಂಚೆ ಕಚೇರಿಗೆ ಸಂಬಂಧಿಸಿದ ಜಾಗದ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಟ್ಟಡ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಗರಾಜ್ ಪಾಟೀಲ್, ವಿಭಾಗೀಯ ಅಧಿಕ್ಷಕರು ಕೊಪ್ಪಳ, ಜಿ ಎನ್. ಹಳ್ಳಿ, ಪಂಚಾಯತ್ ಆಡಳಿತ ಅಧಿಕಾರಿ ಆನಂದ್ ಕೆರೂರು, ಗ್ರಾ. ಪಂ. ಪಿಡಿಓ ವೀರನಗೌಡ ಚೆನ್ನವಿರಾಗೌಡ, ಯಂಕಣ್ಣ ಯಾರಾಶಿ, ತಿಮ್ಮಣ್ಣ ಚೌಡಕಿ, ಹನಮಂತಗೌಡ ಚೆಂಡೂರು, ಶಿವುಕುಮಾರ್ ಆದಾಪುರ, ಮಹಮ್ಮದ್ ಸಿರಾಜ್ವುದ್ದಿನ್, ವಿರೇಶ್ ಬಿಸನಳ್ಳಿ, ಮಲ್ಲಿಕಾರ್ಜುನ ಮೇಟಿ, ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.