BREAKING NEWS : ಕೊಪ್ಪಳದ ಭೀಮವ್ವ ಶಿಳ್ಳೆಕ್ಯಾತರಗೆ 2025ರ ಪದ್ಮಶ್ರೀ ಘೋಷಣೆ.

You are currently viewing BREAKING NEWS : ಕೊಪ್ಪಳದ ಭೀಮವ್ವ ಶಿಳ್ಳೆಕ್ಯಾತರಗೆ 2025ರ ಪದ್ಮಶ್ರೀ ಘೋಷಣೆ.

ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ತೊಗಲುಗೊಂಬೆ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿ‍ಳ್ಳೇಕ್ಯಾತರ ಅವರಿಗೆ 2025ರ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

ಕೊಪ್ಪಳ  : ತಾಲೂಕಿನ ಮೋರನಾಳ ಗ್ರಾಮದಲ್ಲಿ 1929ರಲ್ಲಿ ಜನಿಸಿದ ಭೀಮವ್ವ ಶಿಳ್ಳೆಕ್ಯಾತರ, ತೊಗಲುಗೊಂಬೆಯಾಟದಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ. ತಮ್ಮ14ನೇ ವಯಸ್ಸಿನಿಂದ ಇಲ್ಲಿಯವರೆಗೂ ತೊಗಲುಗೊಂಬೆಯಾಟವನ್ನು ಕುಲಕಸುಬಾಗಿ ಮಾಡುತ್ತಾ ಕಲೆಯಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.

ಅಮೇರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್, ಹಾಲೆಂಡ್ ಮುಂತಾದ ದೇಶಗಳಲ್ಲಿ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳನ್ನು ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ.

ಭೀಮವ್ವ ಶಿಳ್ಳೆಕ್ಯಾತರ ಅನಕ್ಷರಸ್ಥೆಯಾದರೂ ವಂಶಪಾರಂಪರ್ಯವಾಗಿ ಬಂದ ತೊಗಲುಗೊಂಬೆಯಾಟ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಡೀ ಜಿಲ್ಲೆಯಲ್ಲಿ ಇದೊಂದೇ ಕುಟುಂಬ ನೂರಾರು ವರ್ಷಗಳಿಂದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುತ್ತಾ ಬಂದಿದೆ.

ಇವರ ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಿ ಭೀಮವ್ವ ಸಹ ಗೊಂಬೆಯಾಟ ಪ್ರದರ್ಶನಕ್ಕೆ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಭೀಮವ್ವ ಶಿಳ್ಳೆಕ್ಯಾತರ ಹೆಚ್ಚು ಪೌರಾಣಿಕ ಕಥೆ ಆಧಾರಿತ ರಾಮಾಯಣ, ಕುರುಕ್ಷೇತ್ರ, ವಿರಾಟ ಪರ್ವ, ಲವಕುಶ ಕಾಳಗ, ಕರ್ಣಪರ್ವ, ದ್ರೌಪದಿ ವಸ್ತ್ರಾಪಹರಣ, ಆದಿಪರ್ವ ಸೇರಿ ಮಹಾಭಾರತದ 18 ಪರ್ವಗಳನ್ನು ಪ್ರದರ್ಶಿಸುತ್ತಾರೆ. ತಮ್ಮ ಕುಟುಂಬದವರಿಗೆ ಇಂದಿಗೂ ಗೊಂಬೆಯಾಟ ತರಬೇತಿ ನೀಡುತ್ತಿದ್ದಾರೆ.

ಭೀಮವ್ವ ಶಿಳ್ಳೆಕ್ಯಾತರ ಅವರ ಸೇವೆ ಗುರುತಿಸಿ ಸಂಘ-ಸಂಸ್ಥೆಗಳು ಅನೇಕ ಗೌರವ ಪ್ರಶಸ್ತಿ ನೀಡಿವೆ. ಭೀಮವ್ವನವರ ಮಗ ಕೇಶಪ್ಪ ಶಿಳ್ಳೆಕ್ಯಾತರ ಹಾಗೂ ಇವರ ಮಕ್ಕಳು ಸೇರಿ ಒಟ್ಟು 6 ಜನರು ಗೊಂಬೆಯಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಭೀಮವ್ವ ಶಿಳ್ಳೆಕ್ಯಾತರ ಸಾಧನೆಯನ್ನು ಕಂಡು ಸರಕಾರವು ಅನೇಕ ಪ್ರಶಸ್ತಿ ನೀಡಿ ಗೌರವಿಸಿದೆ. 1993ರಲ್ಲಿ ತೆಹರಾನ್‌ನಲ್ಲಿ ಬೊಂಬೆ ಉತ್ಸವ ಪ್ರಶಸ್ತಿ, 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಪ್ರಶಸ್ತಿ, 2005-06ನೇ ಸಾಲಿನಲ್ಲಿ ಜಾನಪದ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2020-21ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿ, 2022ರಲ್ಲಿ ಹಿರಿಯ ನಾಗರೀಕ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ.

Leave a Reply

error: Content is protected !!