PV NEWS : ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ನೀಡಿರುವ ಸ್ಥಾನಮಾನಗಳು ಹಾಗೂ ಪ್ರಶಸ್ತಿ ರದ್ದುಗೊಳಿಸಲು ಒತ್ತಾಯ!
PV NEWS ಕನ್ನಡ 24×7
ಕೊಪ್ಪಳ, ಸೆ. 4: ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ನೀಡಿರುವ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯತ್ವ, ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಸಮಿತಿ ಸದಸ್ಯತ್ವ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ 2026–27ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸುನೀಲಕುಮಾರ ಮಠದ ಮಾತನಾಡಿ, “ಶಿವಾನಂದ ತಗಡೂರ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಅವರಿಗೆ ನೀಡಿರುವ ಸದಸ್ಯತ್ವಗಳು ಹಾಗೂ ಪ್ರಶಸ್ತಿಯನ್ನು ತಕ್ಷಣ ರದ್ದುಗೊಳಿಸಬೇಕು” ಎಂದು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ದೊಡ್ಡಮನಿ ಮಾತನಾಡಿ, “ಸಂಘದ ಅಭಿವೃದ್ಧಿಗಾಗಿ ಸಂಗ್ರಹಿಸಲಾದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ, ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರಿಗೆ ಸರ್ಕಾರದ ಅಕಾಡೆಮಿ ಹಾಗೂ ಸಮಿತಿ ಸದಸ್ಯತ್ವಗಳಂತಹ ಸ್ಥಾನಮಾನಗಳನ್ನು ಮುಂದುವರಿಸುವುದು ಪತ್ರಕರ್ತರ ಗೌರವ ಮತ್ತು ಘನತೆಗೆ ಧಕ್ಕೆಯುಂಟುಮಾಡಬಹುದು. ಈ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಮನವಿಯೊಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯತ್ವದ ಪ್ರತಿ, ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಸಮಿತಿ ಸದಸ್ಯತ್ವದ ಆದೇಶ, ಕರ್ನಾಟಕ ನಾಟಕ ಅಕಾಡೆಮಿಯ 2026–27ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಆದೇಶ ಹಾಗೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಎಫ್‌ಐಆರ್ ಪ್ರತಿಯನ್ನು ಲಗತ್ತಿಸಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು.
ಪತ್ರಕರ್ತರ ಗೌರವ, ಘನತೆ ಮತ್ತು ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಕುಕನೂರು ತಾಲ್ಲೂಕು ಅಧ್ಯಕ್ಷ ಚಂದ್ರು ಆರ್. ಭಾನಾಪುರ, ಕಾನೂನು ಸಲಹೆಗಾರರಾದ ಕೋಟೇಶ್ವರ ಮ್ಯಾಗಳಮನಿ, ಮಹೇಶ ಕಲ್ಮಠ, ಮಹಮ್ಮದ್ ಸಲೀಂ ಸಾಹೇಬ್ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.