PV NEWS : ಕುಷ್ಟಗಿ ತಾಲ್ಲೂಕು ಬರ ಪೀಡಿತ ಪ್ರದೇಶ ಘೋಷಣೆಗೆ ಸರ್ಕಾರದ ನಿರ್ಲಕ್ಷ್ಯ: ವೀರೇಶ ನಿಡಗುಂದಿಮಠ
ಕುಷ್ಟಗಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹ!
PV NEWS ಕನ್ನಡ 24×7|
ಕುಷ್ಟಗಿ, ಸೆ. 8: ತಾಲೂಕಿನಲ್ಲಿ ಸಕಾಲದಲ್ಲಿ ಮಳೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಗಾಗಿ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ಸಾಲ-ಶೂಲ ಮಾಡಿ ಖರೀದಿಸಿರುವ ರೈತರು, ಮಳೆ ಕೊರತೆಯಿಂದ ಕಂಗಾಲಾಗಿದ್ದಾರೆ ಎಂದು ಜಾತ್ಯತೀತ ಜನತಾದಳದ ತಾಲೂಕು ಅಧ್ಯಕ್ಷ ವೀರೇಶ ನಿಡಗುಂದಿಮಠ ತಿಳಿಸಿದ್ದಾರೆ.
ಮಳೆ ಕೊರತೆಯಿಂದ ಯಲಬುರ್ಗಾ, ಕುಷ್ಟಗಿ ಹಾಗೂ ಕೊಪ್ಪಳ ತಾಲೂಕುಗಳ ರೈತರು ಸಂಕಷ್ಟ ಎದುರಿಸುತ್ತಿದ್ದು, ಈ ಭಾಗಗಳ ಬರ ಪರಿಸ್ಥಿತಿಯನ್ನು ಸರ್ಕಾರ ತಕ್ಷಣ ಮರುಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕುಷ್ಟಗಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ, ಅರ್ಹ ರೈತರಿಗೆ ಸರ್ಕಾರದ ಬರ ಪರಿಹಾರ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು. ರೈತರ ಸಂಕಷ್ಟವನ್ನು ಕಡೆಗಣಿಸಿ ಬರ ಘೋಷಣೆಯಲ್ಲಿ ಮತ್ತಷ್ಟು ವಿಳಂಬ ಮಾಡಿದರೆ ತಾಲೂಕಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಕುಷ್ಟಗಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ವೀರೇಶ ನಿಡಗುಂದಿಮಠ ಆಗ್ರಹಿಸಿದರು.