ಕುಕನೂರು, ಸೆ. 08: ತಾಲೂಕಿನ ಕಕ್ಕಿಹಳ್ಳಿ (ಆಳಿಯಪ್ಪನಮಠ) ಗ್ರಾಮದಲ್ಲಿ ಶ್ರೀ ಆಳಿಯ ಚನ್ನಬಸವೇಶ್ವರ ಜಾತ್ರಾ ಮಹೋತ್ಸವವು ಇಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಜಾತ್ರೆಯ ಅಂಗವಾಗಿ ಸೋಮವಾರ ಗುದ್ದೇಪ್ಪನಮಠದ ಶ್ರೀ ರುದ್ರಮುನೀಶ್ವರ ದರ್ಶನದ ಬಳಿಕ ಕುಕನೂರು ಕೋಳಿಪೇಟೆ ಶಿಬಾರಗಟ್ಟಿಯಿಂದ ಶ್ರೀ ಆಳಿಯ ಚನ್ನಬಸವೇಶ್ವರ ಹಾಗೂ ಶ್ರೀ ರುದ್ರಮುನೀಶ್ವರ ಜೋಡ ಪಲ್ಲಕ್ಕಿಗಳ ಮೆರವಣಿಗೆ ಸಕಲ ವಾದ್ಯಮೇಳಗಳೊಂದಿಗೆ ಗುದ್ದೇಶ್ವರ ಮಠದವರೆಗೆ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ 6.15ಕ್ಕೆ ಶ್ರೀ ಆಳಿಯ ಚನ್ನಬಸವೇಶ್ವರನ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನೆರವೇರಲಿದೆ. ಸಂಜೆ 5.30ಕ್ಕೆ ಕಕ್ಕಿಹಳ್ಳಿ ಗ್ರಾಮದ ಕರಡಿ ಮಜಲು ಹಾಗೂ ಭಜನಾ ಸೇವೆಯೊಂದಿಗೆ ಮಹಾರಥೋತ್ಸವ ಜರುಗಲಿದೆ. ಗುದ್ದೇಪ್ಪನಮಠ, ಹರಿಶಂಕರಬಂಡಿ, ಕೋಣಾಪೂರ, ಯಡಿಯಾಪೂರ, ಚನಪನಹಳ್ಳಿ, ಬಳಗೇರಿ, ಬೂದಗಂಪ, ತಿಪ್ಪರಸನಾಳ ಹಾಗೂ ಬೆಡವಟ್ಟಿ ಗ್ರಾಮಗಳ ಡೊಳ್ಳು ಮತ್ತು ಭಜನಾ ಮಂಡಳಿಗಳು ಭಾಗವಹಿಸಲಿವೆ.
ಸಂಜೆ 6ರಿಂದ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಗೋಪುರ ನಿರ್ಮಾಣಕ್ಕೆ ಸಹಕಾರಕ್ಕೆ ಮನವಿ
ಶ್ರೀ ಆಳಿಯ ಚನ್ನಬಸವೇಶ್ವರ ದೇವಸ್ಥಾನದ ನೂತನ ಗೋಪುರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಭಕ್ತಾದಿಗಳು ತನು, ಮನ, ಧನದಿಂದ ಸೇವೆ ಸಲ್ಲಿಸುವ ಮೂಲಕ ಕಾಮಗಾರಿಗೆ ಸಹಕರಿಸಬೇಕು ಎಂದು ಜಾತ್ರಾ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಕ್ಕಿಹಳ್ಳಿ ಗ್ರಾಮ ಮತ್ತು ತಾಂಡಾದ ಸ್ವಸಹಾಯ ಸಂಘಗಳ ಮಹಿಳೆಯರು, ಗ್ರಾಮದ ಗುರು-ಹಿರಿಯರು ಹಾಗೂ ಯುವಕರು ಮನವಿ ಮಾಡಿದ್ದಾರೆ.