PV NEWS : ಕುಕನೂರಿನಲ್ಲಿ ₹100 ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳು : ಅಭಿವೃದ್ಧಿ ಕಾಮಗಾರಿಗಳಿಗೆ ಯಾರಿಂದಲೂ ತಡೆ ಸಾಧ್ಯವಿಲ್ಲ : ಸಚಿವ ರಾಯರೆಡ್ಡಿ!
PV NEWS ಕನ್ನಡ 24×7:
ಪ್ರಜಾಸೌಧ, ಬುದ್ಧ–ಬಸವ–ಅಂಬೇಡ್ಕರ್ ಭವನ, ತಾಲೂಕು ಆಸ್ಪತ್ರೆ, ಕೋರ್ಟ್ ಕಟ್ಟಡ ಹಾಗೂ ಕ್ರೀಡಾಂಗಣ ನಿರ್ಮಾಣಕ್ಕೆ ಒತ್ತು..!
ಕುಕನೂರು, ಸೆ.14: ಪಟ್ಟಣದ 19ನೇ ವಾರ್ಡ್‌ನಲ್ಲಿರುವ ಗುದ್ನೆಪ್ಪನ ಮಠದ ಜಮೀನಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವಿವಿಧ ಸರ್ಕಾರಿ ಕಟ್ಟಡಗಳು ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ಗುದ್ನೆಪ್ಪನ ಮಠದ ಜಮೀನು ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ವ್ಯಾಪ್ತಿಗೆ ಸೇರಿದ್ದು, ಸರ್ಕಾರ ಮತ್ತು ಮುಜರಾಯಿ ಇಲಾಖೆಗೆ ಸೇರಿದ ಆಸ್ತಿಯು ಸಾರ್ವಜನಿಕರ ಆಸ್ತಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಎದುರಾಗಿದ್ದ ಕಾನೂನು ಹಾಗೂ ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಯೋಜನೆಗಳನ್ನು ಮುಂದುವರಿಸಲಾಗಿದೆ ಎಂದು ಅವರು ಹೇಳಿದರು.
ತಾಲೂಕು ಪಂಚಾಯಿತಿಯ ಪ್ರಜಾಸೌಧ ಕಟ್ಟಡವನ್ನು ₹18.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರಿಗೆ ಸರ್ಕಾರಿ ಸೇವೆ ಪಡೆಯಲು ಅನುಕೂಲವಾಗಲಿದೆ ಎಂದರು.
₹15 ಕೋಟಿ ವೆಚ್ಚದಲ್ಲಿ ಬುದ್ಧ–ಬಸವ–ಅಂಬೇಡ್ಕರ್ ಭವನ…!
ಸಾರ್ವಜನಿಕ ಸಮಾರಂಭಗಳು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ₹15 ಕೋಟಿ ವೆಚ್ಚದಲ್ಲಿ ಬುದ್ಧ–ಬಸವ–ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಯಲಬುರ್ಗಾದಲ್ಲಿರುವ ಭವನಕ್ಕಿಂತಲೂ ದೊಡ್ಡದಾಗಿ ವಿನ್ಯಾಸಗೊಳಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುವಂತೆ ಖಾಸಗಿ ಕಲ್ಯಾಣ ಮಂಟಪಗಳ ದುಬಾರಿ ಬಾಡಿಗೆಯನ್ನು ತಪ್ಪಿಸಿ, ಈ ಭವನವನ್ನು ₹15 ಸಾವಿರದಿಂದ ₹20 ಸಾವಿರದೊಳಗಿನ ನಾಮಮಾತ್ರ ಬಾಡಿಗೆಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ಕುಕನೂರಿನಲ್ಲಿ ₹42 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ತಾಲೂಕು ಆಸ್ಪತ್ರೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.
ಇದೇ ವೇಳೆ ಜೆಎಂಎಫ್‌ಸಿ ನ್ಯಾಯಾಲಯದ ಕಟ್ಟಡ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸೆ.17ರಂದು ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಬಳಿಕ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ರಾಯರೆಡ್ಡಿ ಹೇಳಿದರು.
ಯುವಜನರು ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ₹8.50 ಕೋಟಿಗೂ ಅಧಿಕ ವೆಚ್ಚದಲ್ಲಿ ರನ್ನಿಂಗ್ ಟ್ರ್ಯಾಕ್ ಒಳಗೊಂಡ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಅಗತ್ಯವಿದ್ದರೆ ಕ್ರೀಡಾಂಗಣ ಹಾಗೂ ಕ್ರೀಡಾ ಸಂಕೀರ್ಣಕ್ಕೆ ಹೆಚ್ಚುವರಿ ಅನುದಾನ ಒದಗಿಸಲು ಸಿದ್ಧವಿರುವುದಾಗಿ ಸಚಿವರು ಹೇಳಿದರು.
ಇಂಡೋರ್ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಇತರ ಕ್ರೀಡಾ ಸೌಲಭ್ಯಗಳನ್ನು ಕೂಡ ಪಟ್ಟಣದಲ್ಲಿ ಕಲ್ಪಿಸಲಾಗುವುದು ಎಂದರು.
ತೀವ್ರ ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಿಗಣಿಸಿ ಕುಕನೂರು ತಾಲೂಕನ್ನು ಈಗಾಗಲೇ ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಇದರಿಂದ ಅರ್ಹ ರೈತರಿಗೆ ಬೆಳೆ ಪರಿಹಾರ ದೊರೆಯಲಿದೆ ಎಂದು ರಾಯರೆಡ್ಡಿ ತಿಳಿಸಿದರು.
ಮುಂದಿನ ವಾರ ಯಲಬುರ್ಗಾ ತಾಲೂಕನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಲು ಕ್ರಮ ಕೈಗೊಳ್ಳಲಾಗುವುದು. ಗದಗ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಅವರಿಗೂ ಮನವಿ ಮಾಡಲಾಗಿದೆ ಎಂದರು.
‘ಅಭಿವೃದ್ಧಿ ಕಾಮಗಾರಿಗಳಿಗೆ ಯಾರಿಂದಲೂ ತಡೆ ಸಾಧ್ಯವಿಲ್ಲ’
ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕಾಮಗಾರಿಗಳನ್ನು ಕೆಲವರು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರ ಹಿತದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ ಯಾರಿಂದಲೂ ತಡೆ ಒಡ್ಡಲು ಸಾಧ್ಯವಿಲ್ಲ. ಜನರ ಪರವಾಗಿ ತಾವು ಸದಾ ನಿಲ್ಲುತ್ತೇನೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.