PV NEWS : ಹಿರಿಯ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ!
PV NEWS ಕನ್ನಡ 24×7|
ನವದೆಹಲಿ, ಸೆ 16: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಿಸಿದೆ.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸ್ವರ್ಣ ಕಮಲ, ₹10 ಲಕ್ಷ ನಗದು, ಸ್ಮರಣಿಕೆ ಹಾಗೂ ಶಾಲು ಪ್ರಶಸ್ತಿಯ ಭಾಗವಾಗಿವೆ.
1974ರ ‘ಅಂಕುರ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅನಂತ್ ನಾಗ್, 1975ರ ‘ಹಂಸಗೀತೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಐದು ದಶಕಗಳ ಕಲಾ ಪಯಣದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕರ್ನಾಟಕ ರಾಜ್ಯದ ಅತ್ಯುತ್ತಮ ನಟ ಪ್ರಶಸ್ತಿ ನಾಲ್ಕು ಬಾರಿ, ಫಿಲ್ಮ್‌ಫೇರ್ ಪ್ರಶಸ್ತಿ ಆರು ಬಾರಿ ಪಡೆದಿರುವ ಅವರು, ಇತ್ತೀಚೆಗೆ ಪದ್ಮಭೂಷಣ ಗೌರವಕ್ಕೂ ಪಾತ್ರರಾಗಿದ್ದರು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.