SPECIAL STORY : ಬಸವಣ್ಣನವರ ಪುತ್ಥಳಿ ಶಂಕುಸ್ಥಾಪನೆ ಹಿನ್ನೆಲೆ : ದಶಕಗಳಿಂದಿದ್ದ ಅಂಗಡಿ-ಶೆಡ್‌ಗಳ ತೆರವು, ವ್ಯಾಪಾರಸ್ಥರ ಬದುಕು ಸಂಕಷ್ಟಕ್ಕೆ!
ಪ್ರಜಾವೀಕ್ಷಣೆ ಡಿಜಿಟಲ್ ವಿಶೇಷ ಸುದ್ದಿ :
ಕುಕನೂರು, ಏಪ್ರಿಲ್ 18 : ಪಟ್ಟಣದ ಸೌಂದರ್ಯೀಕರಣ ಹಾಗೂ ಬಸವಣ್ಣನವರ ಪುತ್ಥಳಿ ನಿರ್ಮಾಣದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ರಸ್ತೆ ಬದಿ ಅಂಗಡಿ ಮತ್ತು ಶೆಡ್‌ಗಳ ತೆರವು ಕಾರ್ಯಾಚರಣೆ ಕೈಗೊಂಡಿದೆ.
ಇದರಿಂದ ದಶಕಗಳಿಂದ ಇದೇ ವ್ಯಾಪಾರವನ್ನು ನಂಬಿಕೊಂಡಿದ್ದ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. “ಸ್ವಚ್ಛತೆ ಇರಲಿ, ಆದರೆ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ” ಎಂಬ ವ್ಯಾಪಾರಸ್ಥರ ಆಕ್ರಂದನ ಕೇಳಿಬರುತ್ತಿದೆ.
ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಟೀ ಅಂಗಡಿಗಳು, ಹೋಟೆಲ್‌ಗಳು, ಸೈಕಲ್ ಅಂಗಡಿಗಳು ಸೇರಿದಂತೆ ಹಲವು ರಸ್ತೆಬದಿ ಮಳಿಗೆಗಳನ್ನು ತೆರವುಗೊಳಿಸಲಾಯಿತು. ಹಲವು ವರ್ಷಗಳಿಂದ ಜೀವನೋಪಾಯವಾಗಿದ್ದ ಈ ಅಂಗಡಿಗಳು ನೆಲಸಮವಾಗಿವೆ.
ಮೇ 4ರಂದು ಇದೇ ಸ್ಥಳದಲ್ಲಿ ಶಾಸಕ ಬಸವರಾಜ್ ರಾಯರೆಡ್ಡಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಜಗಜ್ಯೋತಿ ಬಸವಣ್ಣ, ಸಂಗೊಳ್ಳಿ ರಾಯಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗಳ ಶಂಕುಸ್ಥಾಪನೆ ನಡೆಯಲಿದ್ದು, ಈ ಸ್ಥಳದಲ್ಲಿ ಬಸವಣ್ಣನವರ ಸ್ಮಾರಕ ನಿರ್ಮಾಣ ಉದ್ದೇಶಿಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿಗಳ ಹಿಂಭಾಗದಲ್ಲೇ ಸ್ಮಾರಕ ನಿರ್ಮಾಣವಾಗಲಿದೆ ಎನ್ನಲಾಗಿದೆ.
ಒಂದು ಕಡೆ ಸಾಲ ಪಡೆದು ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳು ಈಗ ಅಂಗಡಿಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ತೀರಿಸುವುದೇ ದೊಡ್ಡ ಸಮಸ್ಯೆಯಾಗಿದೆ. “20-30 ವರ್ಷಗಳಿಂದ ಇದೇ ಜಾಗದಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು,ಈ ಕುರಿತು ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ. ಇಲ್ಲವಾದರೆ ಬದುಕು ಕಷ್ಟಕರವಾಗಲಿದೆ,” ಎಂದು ವ್ಯಾಪಾರಸ್ಥರು ತಿಳಿಸಿದರು.
“ನಾವು ಸುಮಾರು 15-20 ವರ್ಷಗಳಿಂದ ರಸ್ತೆ ಬದಿಯಲ್ಲಿ ಸಣ್ಣ ವ್ಯಾಪಾರ ನಡೆಸಿ ಕುಟುಂಬವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸಿರುವುದರಿಂದ ನಮ್ಮ ಜೀವನ ಸಂಕಷ್ಟಕ್ಕೀಡಾಗಿದೆ. ಪಟ್ಟಣ ಪಂಚಾಯತಿ ವತಿಯಿಂದ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ. ಇಲ್ಲಾಂದ್ರೆ ಮುಂದೆ ವ್ಯಾಪಾರ ನಡೆಸಿ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ನಾವು ಸಾಲ ಪಡೆದು ವ್ಯಾಪಾರ ಮಾಡುತ್ತಿದ್ದೇವೆ, ಈಗ ಅಂಗಡಿಗಳೇ ಇಲ್ಲದ ಕಾರಣ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ನೋವನ್ನು ಕೇಳುವವರು ಯಾರು ಎಂಬ ಸ್ಥಿತಿ ಉಂಟಾಗಿದೆ,”
“ಪಟ್ಟಣ ತೀವ್ರವಾಗಿ ಬೆಳೆಯುತ್ತಿದಂತೆ ಜನಸಂಖ್ಯೆ ಹಾಗೂ ವಾಹನ ಸಂಚಾರ ಹೆಚ್ಚಳದಿಂದ ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳ ಅನ್ವಯ, ಫುಟ್‌ಪಾತ್ ಮತ್ತು ರಸ್ತೆ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಶೆಡ್‌ಗಳು ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದು ತಿಂಗಳಿನಿಂದ ವ್ಯಾಪಾರಸ್ಥರಿಗೆ ನೋಟಿಸ್ ನೀಡಿ ಮನವರಿಕೆ ಮಾಡಲಾಗಿದ್ದು, ಬಹುತೇಕರು ಸಹಕಾರ ನೀಡಿದ್ದಾರೆ. ರಸ್ತೆ ಅಗಲೀಕರಣ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ. ಹೆಚ್ಚಿನ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ತಾವೇ ತೆರವುಗೊಳಿಸುತ್ತಿದ್ದು, ಮುನ್ಸಿಪಲ್ ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳ ಅನಧಿಕೃತ ಆಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.”