PV NEWS : ಸಚಿವ ಬಸವರಾಜ ರಾಯರೆಡ್ಡಿಗೆ ಮತ್ತೊಮ್ಮೆ ಉನ್ನತ ಶಿಕ್ಷಣ ಖಾತೆ : ಕ್ಷೇತ್ರದ ಜನರಲ್ಲಿ ಹರ್ಷ; ಕೊಪ್ಪಳ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹೊಸ ನಿರೀಕ್ಷೆ!

PV NEWS ಕನ್ನಡ 24×7:
ಯಲಬುರ್ಗಾ-ಕುಕನೂರು, ಆ 12 : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಶಾಸಕ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮತ್ತೊಮ್ಮೆ ಉನ್ನತ ಶಿಕ್ಷಣ ಇಲಾಖೆಯ ಖಾತೆ ನೀಡಿರುವುದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜನತೆ ಹಾಗೂ ಅವರ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬಗೊಂಡ ಬಳಿಕ ಖಾತೆ ಹಂಚಿಕೆ ವಿಚಾರದಲ್ಲಿಯೂ ಹಲವು ದಿನಗಳ ಕಾಲ ಗೊಂದಲ ಮುಂದುವರಿದಿತ್ತು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರ ಖಾತೆ ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಬಸವರಾಜ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ.
ಇದರೊಂದಿಗೆ ರಾಯರೆಡ್ಡಿ ಅವರು ಎರಡನೇ ಬಾರಿಗೆ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದಂತಾಗಿದೆ. ಅವರ ಹಿಂದಿನ ಅವಧಿಯ ಅನುಭವ ಮತ್ತು ಇಲಾಖೆಯ ಕಾರ್ಯವೈಖರಿಯ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಲವು ಮಹತ್ವದ ಬದಲಾವಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಬಹುದು ಎಂಬ ನಿರೀಕ್ಷೆ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ.
