PV NEWS : ಕುಕನೂರು | ಗವಿಸಿದ್ದೇಶ್ವರ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ
PV NEWS ಕನ್ನಡ 24×7:
ಕುಕನೂರು, ಸೆ.18: ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯಲ್ಲಿ 79ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಶರಣಪ್ಪ ಗುಡ್ಲಾನೂರ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದ ಬಹುತೇಕ ಭಾಗಗಳು ಸ್ವಾತಂತ್ರ್ಯ ಪಡೆದ ನಂತರವೂ ಹೈದರಾಬಾದ್ ಕರ್ನಾಟಕ ಪ್ರದೇಶವು ನಿಜಾಮನ ಆಳ್ವಿಕೆಯಿಂದ ಮುಕ್ತವಾಗಲು ಹೋರಾಟ ನಡೆಸಬೇಕಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ನಡೆದ ‘ಆಪರೇಷನ್ ಪೋಲೊ’ ಕಾರ್ಯಾಚರಣೆಯ ಬಳಿಕ ಈ ಭಾಗದ ಜನರು ವಿಮೋಚನೆ ಹೊಂದಿದರು ಎಂದು ಹೇಳಿದರು.
ವಿಶ್ವಕರ್ಮ ಜಯಂತಿಯ ಕುರಿತು ಮಾತನಾಡಿದ ಅವರು, ವಿಶ್ವಕರ್ಮರನ್ನು ದೇವಾನುದೇವತೆಗಳಿಗೆ ಅರಮನೆಗಳು, ಶಸ್ತ್ರಾಸ್ತ್ರಗಳು ಹಾಗೂ ವಿವಿಧ ನಿರ್ಮಾಣಗಳನ್ನು ರೂಪಿಸಿದ ಅಪ್ರತಿಮ ದೇವಶಿಲ್ಪಿ ಎಂದು ಪುರಾಣಗಳಲ್ಲಿ ಪರಿಗಣಿಸಲಾಗಿದೆ. ಅವರ ಸೃಜನಶೀಲತೆ, ಕೌಶಲ್ಯ ಹಾಗೂ ನಿರ್ಮಾಣ ಪರಂಪರೆಯನ್ನು ಸ್ಮರಿಸುವುದು ವಿಶ್ವಕರ್ಮ ಜಯಂತಿಯ ಮಹತ್ವವಾಗಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಜಿ.ಎಂ. ಹೊಸಮನಿ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಮಹಾನ್ ನೇತಾರರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಇಂದಿನ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶವು ಹಿಂದೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿತ್ತು. ಸಂವಿಧಾನದ 371(ಜೆ) ಕಲಂ ಜಾರಿಯಾದ ಬಳಿಕ ಈ ಭಾಗದಲ್ಲಿ ಹಲವು ಅಭಿವೃದ್ಧಿ ಅವಕಾಶಗಳು ದೊರೆತಿವೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಗುರು ವಿ.ಕೆ. ಬಂಡಿವಡ್ಡರ ಮಾತನಾಡಿ, ದೇಶ ಸ್ವಾತಂತ್ರ್ಯ ಪಡೆದು ಸಂಭ್ರಮಾಚರಣೆಯಲ್ಲಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದ ಜನರು ನಿಜಾಮನ ಆಳ್ವಿಕೆಯಿಂದ ಮುಕ್ತಿಗಾಗಿ ಹೋರಾಡಬೇಕಾಯಿತು. ನಿಜಾಮನ ದಬ್ಬಾಳಿಕೆಯ ವಿರುದ್ಧ ಹೋರಾಡಿ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ ಅವರ ವಿಚಾರ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಜೆ. ಪಾಟೀಲ್, ಬಿ.ವಿ. ಲಕ್ಷಾಣಿ, ಗವಿಸಿದ್ದಪ್ಪ ಕರಮುಡಿ, ವಿ.ಆರ್. ಹಿರೇಮಠ, ಡಿ.ಡಿ. ಜೋಗಣ್ಣವರ, ಆರ್.ಡಿ. ರಾಟೋಡ, ಮಹೇಶ, ಮಂಜುಳಾ, ದೇವಿ, ರುದ್ರಪ್ಪ, ಭುವನೇಶ್ವರಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.