BREAKING : ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ!
1111.pdf – 2
‘ಕೊಪ್ಪಳದ ಗವಿಮಠದ ಸಾಮಾಜಿಕ ಸೇವಾ ಪರಂಪರೆಗೆ ಮತ್ತೊಂದು ಗೌರವದ ಗರಿ’
PV NEWS KANNADA 24×7 :
ಬೆಂಗಳೂರು, ಸೆ. 24: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಈ ವರ್ಷದ ಉದ್ಘಾಟಕರಾಗಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ವಿಧಾನಸೌಧದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದು, ದಸರಾ ಉದ್ಘಾಟಕರ ಆಯ್ಕೆ ಕುರಿತು ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಬಿದ್ದಿದೆ.
‘ಜಲಋಷಿ’ ಎಂದೇ ಪ್ರಸಿದ್ಧರಾದ ಸ್ವಾಮೀಜಿ
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ 18ನೇ ಪೀಠಾಧಿಪತಿಗಳಾಗಿರುವ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ, ತಮ್ಮ ಸರಳ ಜೀವನ, ಸಾಮಾಜಿಕ ಕಳಕಳಿ ಹಾಗೂ ದಾಸೋಹ ಪರಂಪರೆಯ ಮೂಲಕ ರಾಜ್ಯದಾದ್ಯಂತ ಗಮನ ಸೆಳೆದಿದ್ದಾರೆ.
2002ರ ಡಿಸೆಂಬರ್ 13ರಂದು ತಮ್ಮ ಪೂರ್ವಾಧಿಕಾರಿ ಶ್ರೀ ಶಿವಶಾಂತವೀರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅವರು, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಎದುರಾಗಿದ್ದ ನೀರಿನ ಸಮಸ್ಯೆ ಪರಿಹಾರಕ್ಕೆ ವಿಶೇಷ ಒತ್ತು ನೀಡಿದರು.
‘ಜಲ ದೀಕ್ಷೆ’ ಅಭಿಯಾನದ ಮೂಲಕ ಕೆರೆಗಳ ಹೂಳೆತ್ತುವಿಕೆ, ಜಲಮೂಲಗಳ ಸಂರಕ್ಷಣೆ ಹಾಗೂ ನೀರಿನ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುನ್ನಡೆ ನೀಡಿದರು. ನೂರಾರು ಕೆರೆಗಳ ಪುನಶ್ಚೇತನದಂತಹ ಕಾರ್ಯಗಳ ಮೂಲಕ ಅವರು ‘ಜಲಋಷಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅನ್ನ–ಅರಿವು–ಆಧ್ಯಾತ್ಮದ ದಾಸೋಹ
ಗವಿಮಠದಲ್ಲಿ ಅನ್ನದಾಸೋಹದ ಜೊತೆಗೆ ಶಿಕ್ಷಣ ಮತ್ತು ಆಧ್ಯಾತ್ಮಿಕ ಸೇವೆಗೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅನ್ನ, ಅರಿವು ಮತ್ತು ಆಧ್ಯಾತ್ಮ ಎಂಬ ತ್ರಿವಿಧ ದಾಸೋಹದ ಮೂಲಕ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ವಸತಿ ಮತ್ತು ಶಿಕ್ಷಣದ ನೆರವು ಒದಗಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.
800 ವರ್ಷಗಳ ಪರಂಪರೆಯ ಗವಿಮಠ
ಕೊಪ್ಪಳದ ಗವಿಸಿದ್ದೇಶ್ವರ ಮಠವನ್ನು ಸಾಮಾನ್ಯವಾಗಿ ಗವಿಮಠ ಎಂದೂ ಕರೆಯಲಾಗುತ್ತದೆ. ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕೇಂದ್ರಗಳಲ್ಲಿ ಒಂದಾಗಿರುವ ಈ ಮಠವು ಹಲವು ಶತಮಾನಗಳ ಇತಿಹಾಸ ಹೊಂದಿದೆ.
ಧಾರ್ಮಿಕ ಚಟುವಟಿಕೆಗಳ ಜತೆಗೆ ಶಿಕ್ಷಣ ಸಂಸ್ಥೆಗಳ ನಿರ್ವಹಣೆ, ಅನ್ನದಾಸೋಹ, ಸಮಾಜಮುಖಿ ಸೇವೆ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನದ ಮೂಲಕ ಗವಿಮಠ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ರೂಪಿಸಿಕೊಂಡಿದೆ.
ಈ ವರ್ಷದ ಮೈಸೂರು ದಸರಾ ಉದ್ಘಾಟನೆಗೆ ಹಲವು ಗಣ್ಯರ ಹೆಸರುಗಳು ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಬಂದಿದ್ದವು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಬೇಕು ಎಂಬ ಮನವಿಯೂ ಸರ್ಕಾರದ ಮುಂದಿಟ್ಟಲಾಗಿತ್ತು. ಇದೇ ವೇಳೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರುಗಳೂ ಕೇಳಿಬಂದಿದ್ದವು.
ಇದರೊಂದಿಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಹೆಸರೂ ಚರ್ಚೆಯಲ್ಲಿತ್ತು. ಅಂತಿಮವಾಗಿ ದಸರಾ ಉದ್ಘಾಟಕರ ಆಯ್ಕೆಯ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಟ್ಟದಲ್ಲಿ ಕೈಗೊಳ್ಳಲಾಗಿದ್ದು, ಇದೀಗ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರ ಆಯ್ಕೆ ಅಧಿಕೃತವಾಗಿದೆ.
ಕೊಪ್ಪಳದ ಗವಿಮಠದ ಸಾಮಾಜಿಕ ಸೇವಾ ಪರಂಪರೆಗೆ ಮತ್ತೊಂದು ಗೌರವದ ಗರಿ ಎಂಬ ರೀತಿಯಲ್ಲಿ ಈ ಆಯ್ಕೆ ಗಮನ ಸೆಳೆದಿದೆ.