You are currently viewing PV NEWS : ಕೊಪ್ಪಳ | ಸಮಸ್ತ ಆ್ಯಪ್ ಮೂಲಕ ಹೆಚ್ಚುವರಿ ಕೆಲಸಕ್ಕೆ ಆಶಾಗಳ ವಿರೋಧ!

PV NEWS : ಕೊಪ್ಪಳ | ಸಮಸ್ತ ಆ್ಯಪ್ ಮೂಲಕ ಹೆಚ್ಚುವರಿ ಕೆಲಸಕ್ಕೆ ಆಶಾಗಳ ವಿರೋಧ!

PV NEWS : ಸಮಸ್ತ ಆ್ಯಪ್ ಮೂಲಕ ಹೆಚ್ಚುವರಿ ಕೆಲಸಕ್ಕೆ ಆಶಾಗಳ ವಿರೋಧ!

ಬಾಕಿ ಪ್ರೋತ್ಸಾಹಧನ, ಗೌರವಧನ ಹಾಗೂ ಮೂಲಸೌಲಭ್ಯಗಳ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಕೊಪ್ಪಳ, ಸೆ. 30: ಸಮಸ್ತ ಆ್ಯಪ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಆನ್‌ಲೈನ್ ಕೆಲಸ ಹಾಗೂ ಸಮೀಕ್ಷೆಗಳನ್ನು ವಹಿಸುವುದನ್ನು ನಿಲ್ಲಿಸಬೇಕು, ಬಾಕಿ ಇರುವ ಪ್ರೋತ್ಸಾಹಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ ಸಂಯೋಜಿತ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಈಶ್ವರ ಪಾರ್ಕ್‌ನಿಂದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಆಶಾ ಕಾರ್ಯಕರ್ತೆಯರು, ನಂತರ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ಮಾತನಾಡಿ, ಆಶಾ ಕಾರ್ಯಕರ್ತೆಯರು ತಾಯಿ–ಮಗು ಆರೋಗ್ಯ ಮೇಲ್ವಿಚಾರಣೆ, ಲಸಿಕೆ, ಗರ್ಭಿಣಿಯರ ನೋಂದಣಿ, ಹೆರಿಗೆ ಪೂರ್ವ ಹಾಗೂ ನಂತರದ ಆರೈಕೆ, ಕ್ಷಯರೋಗ ನಿಯಂತ್ರಣ ಮತ್ತು ಆರೋಗ್ಯ ಸಮೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಸಮಸ್ತ ಆ್ಯಪ್ ಮೂಲಕ ಹೆಚ್ಚುವರಿ ಆನ್‌ಲೈನ್ ದಾಖಲಾತಿ ಹಾಗೂ ಸಮೀಕ್ಷೆಗಳನ್ನು ಕಡ್ಡಾಯಗೊಳಿಸಿರುವುದರಿಂದ ಕಾರ್ಯಕರ್ತೆಯರ ಮೇಲಿನ ಕೆಲಸದ ಹೊರೆ ಹೆಚ್ಚಾಗಿದೆ ಎಂದು ಹೇಳಿದರು.

ಸಮಸ್ತ ಆ್ಯಪ್‌ನ ಕೆಲಸ ನಿರ್ವಹಿಸಲು ಅಗತ್ಯವಾದ ಸ್ಮಾರ್ಟ್‌ಫೋನ್, ತಾಂತ್ರಿಕ ಸೌಲಭ್ಯ, ತರಬೇತಿ ಹಾಗೂ ಸೂಕ್ತ ಸಂಭಾವನೆ ಒದಗಿಸದೆ ಹೆಚ್ಚುವರಿ ಕೆಲಸ ವಹಿಸುವುದನ್ನು ನಿಲ್ಲಿಸಬೇಕು. ರಾಜ್ಯಮಟ್ಟದಲ್ಲಿ ನೀಡಿರುವ ಸೂಚನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ನಿರ್ದೇಶನ ನೀಡಬೇಕು. ಸರ್ಕಾರ ಘೋಷಿಸಿರುವ ಕನಿಷ್ಠ ₹10 ಸಾವಿರ ಗೌರವಧನವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡ ಮಾತನಾಡಿ, ಮೂರು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು. 2023ರಿಂದ ಬಾಕಿ ಇರುವ ಟಿಬಿ ಪ್ರೋತ್ಸಾಹಧನ, ಆರ್‌ಸಿಎಚ್ ಪೋರ್ಟಲ್, ಟಿಬಿಐ, ಎನ್‌ಐಡಿ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಪ್ರೋತ್ಸಾಹಧನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.

ಇದಲ್ಲದೆ, 2025ರ ಪಲ್ಸ್ ಪೋಲಿಯೊ ಕಾರ್ಯಕ್ರಮದ ಹಣ, ಬಾಣಂತಿಯರ ಮನೆಭೇಟಿ ಪ್ರೋತ್ಸಾಹಧನ ಹಾಗೂ ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ನಿವೃತ್ತಿ ಇಡಿಗಂಟು ಪಾವತಿಸಬೇಕು ಎಂದು ಒತ್ತಾಯಿಸಿದರು.

ಗಂಗಾವತಿ ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಫದ ಮಾದರಿ ಸಂಗ್ರಹಿಸಿ ತರುವಂತೆ ಆಶಾ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುವುದನ್ನು ಹಾಗೂ ಲಸಿಕೆಗಳ ಡಬ್ಬಿಗಳನ್ನು ಅವರೇ ಸಾಗಿಸುವಂತೆ ಸೂಚಿಸುವುದನ್ನು ನಿಲ್ಲಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಎಂಸಿಎಚ್ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿಶ್ರಾಂತಿ ಕೊಠಡಿ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ರಜೆ ಚೀಟಿ ಕಡ್ಡಾಯಗೊಳಿಸುವುದು, ಲಾರ್ವಾ ಬುಕ್‌ಗಳನ್ನು ಆಶಾ ಕಾರ್ಯಕರ್ತೆಯರೇ ಖರೀದಿಸುವಂತೆ ಒತ್ತಾಯಿಸುವುದು ಹಾಗೂ ದಾಖಲೆಗಳಲ್ಲಿನ ಸಣ್ಣಪುಟ್ಟ ತಪ್ಪುಗಳನ್ನು ಮುಂದಿಟ್ಟುಕೊಂಡು ಬಿಲ್‌ಗಳ ಪಾವತಿಯನ್ನು ತಡೆಹಿಡಿಯುವುದನ್ನು ನಿಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಎಚ್‌ಬಿವೈಎನ್‌ಸಿ ತರಬೇತಿ ಪಡೆಯದ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ತರಬೇತಿ ನೀಡಬೇಕು. ಹೆಚ್ಚುವರಿ ಕೆಲಸ ವಹಿಸುವ ಮೊದಲು ಅಗತ್ಯ ತಾಂತ್ರಿಕ ಸೌಲಭ್ಯ, ತರಬೇತಿ ಮತ್ತು ಸೂಕ್ತ ಮಾರ್ಗದರ್ಶನ ಒದಗಿಸಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಅಧಿಕಾರಿಗಳು ಜಿಲ್ಲಾ ಸಮಿತಿಯೊಂದಿಗೆ ಸಭೆ ನಡೆಸಿ, ಪ್ರತಿ ಬೇಡಿಕೆಯ ಪರಿಹಾರಕ್ಕೆ ಕಾಲಮಿತಿಯ ಕಾರ್ಯಯೋಜನೆ ರೂಪಿಸಬೇಕು. ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಅನ್ನಪೂರ್ಣ ಹಿರೇಕುರುಬರ, ರೇಖಾ ಹೊಸಕೆರ, ಶಬನ ಶಾರದಾ, ಲಲಿತ ಹಿರೇಮಠ, ಸವಿತಾ, ದ್ರಾಕ್ಷಾಯಿಣಿ, ದೇವಕ್ಕ, ಸುನಿತಾ ಆಚಾರ್, ಗಂಗಮ್ಮ, ರಜಿಯ ಬೇಗಮ್, ಮೆರೋನಿಸ, ದೀಪ, ನಿಂಗಮ್ಮ, ಈರಮ್ಮ, ಸಕ್ರಮ್ಮ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Prajavikshane

Chandru R Bhanapaur

Leave a Reply

error: Content is protected !!