PV NEWS : ಕುಕನೂರು ಬಸ್ ಡಿಪೋದಲ್ಲಿ ಡೀಸೆಲ್ ಕೊರತೆ: 8 ಬಸ್‌ಗಳ ಸಂಚಾರಕ್ಕೆ ಎರಡೂವರೆ ಗಂಟೆ ವಿಳಂಬ!
ಒಟ್ಟು 38 ಬಸ್‌ಗಳ ಪೈಕಿ 8 ಬಸ್‌ಗಳು ಬೆಳಗ್ಗೆ 10 ಗಂಟೆಯ ನಂತರ ಸಂಚಾರ ಆರಂಭ; ಸ್ಥಳೀಯ ಹಾಗೂ ಅಂತರ್‌ಜಿಲ್ಲಾ ಪ್ರಯಾಣಿಕರಿಗೆ ತೊಂದರೆ
PV NEWS ಕನ್ನಡ 24×7|
ಕುಕನೂರು, ಅ. 08: ಕುಕನೂರು ಬಸ್ ಡಿಪೋದಲ್ಲಿ ಡೀಸೆಲ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಬುಧವಾರ (ಅ. 07) ಬೆಳಗಿನ ಬಸ್ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಒಟ್ಟು 38 ಬಸ್‌ಗಳ ಪೈಕಿ 8 ಬಸ್‌ಗಳು ನಿಗದಿತ ಸಮಯಕ್ಕೆ ಸಂಚಾರ ಆರಂಭಿಸದೆ ಬೆಳಗ್ಗೆ 10 ಗಂಟೆಯ ನಂತರ ಕಾರ್ಯಾಚರಣೆ ಆರಂಭಿಸಿವೆ.
ಡಿಪೋದಲ್ಲಿ ಡೀಸೆಲ್ ಲಭ್ಯತೆಯಲ್ಲಿ ಉಂಟಾದ ಸಮಸ್ಯೆಯ ಪರಿಣಾಮವಾಗಿ ಈ ಬಸ್‌ಗಳು ಸುಮಾರು ಎರಡೂವರೆ ಗಂಟೆ ತಡವಾಗಿ ಸಂಚಾರ ನಡೆಸಿವೆ ಎನ್ನಲಾಗಿದೆ. ಇದರಿಂದ ಬೆಂಗಳೂರು, ಬೀದರ್, ಮೈಸೂರು, ಬಳ್ಳಾರಿ ದಾವಣಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚರಿಸುವ ಸ್ಥಳೀಯ ಬಸ್‌ಗಳ ಜೊತೆಗೆ ಬೇರೆ ಜಿಲ್ಲೆಗಳಿಗೆ ತೆರಳುವ ಬಸ್‌ಗಳ ಪ್ರಯಾಣಿಕರೂ ತೊಂದರೆ ಅನುಭವಿಸುವಂತಾಯಿತು.
ಬೆಳಗಿನ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವಿವಿಧ ಕೆಲಸಗಳಿಗಾಗಿ ಪ್ರಯಾಣಿಸುವ ಸಾರ್ವಜನಿಕರು ಬಸ್‌ಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಿಗದಿತ ಸಮಯಕ್ಕೆ ಬಸ್‌ಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಯಾಣಿಕರ ದೈನಂದಿನ ವೇಳಾಪಟ್ಟಿಗೂ ವ್ಯತ್ಯಯ ಉಂಟಾಯಿತು.
ಡೀಸೆಲ್ ಪೂರೈಕೆ ವ್ಯವಸ್ಥೆ ಕುರಿತು ಪ್ರಶ್ನೆ
ಒಂದೇ ಡಿಪೋದಲ್ಲಿ 38 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಅಗತ್ಯ ಪ್ರಮಾಣದ ಡೀಸೆಲ್ ಲಭ್ಯವಾಗದಿರುವುದು ಸಾರ್ವಜನಿಕ ಸಾರಿಗೆ ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲು ಕಾರಣವೇನು, ಮುಂಚಿತವಾಗಿ ಪರ್ಯಾಯ ವ್ಯವಸ್ಥೆ ಏಕೆ ಮಾಡಲಾಗಲಿಲ್ಲ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಡಿಪೋದಲ್ಲಿ ಅಗತ್ಯ ಪ್ರಮಾಣದ ಇಂಧನ ಲಭ್ಯತೆ ಖಚಿತಪಡಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
38 ಬಸ್‌ಗಳ ಪೈಕಿ 8 ಬಸ್‌ಗಳ ಸಂಚಾರ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಘಟನೆಗೆ ನಿಖರ ಕಾರಣ ಮತ್ತು ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ಕೈಗೊಳ್ಳುವ ಕ್ರಮಗಳ ಕುರಿತು ಸಾರಿಗೆ ಇಲಾಖೆ ಸ್ಪಷ್ಟ ಮಾಹಿತಿ ನೀಡಬೇಕಿದೆ.