PV NEWS : ಕುಕನೂರು | ತಾಂಡಾದಿಂದ ರಾಜ್ಯಮಟ್ಟದ ಅಂಗಳಕ್ಕೆ! ಚಕ್ರ ಎಸೆತದಲ್ಲಿ ಸುಷ್ಮಾ ಹೊನ್ನುಂಚಿಯ ಅದ್ಭುತ ಸಾಧನೆ!
ಕ್ರೀಡಾ ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ — ಸುರೇಶ ಬಳೂಟಗಿ ಅಭಿನಂದನೆ
PV NEWS ಕನ್ನಡ 24×7
ಕುಕನೂರು, ಅ. 08: ಇಲ್ಲಿನ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಸುಷ್ಮಾ ಆನಂದ ಹೊನ್ನುಂಚಿ ಅವರು ಜಿಲ್ಲಾಮಟ್ಟದ ಕ್ರೀಡಾಕೂಟದ ಚಕ್ರ ಎಸೆತ (Discus Throw) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈ ಗ್ರಾಮಸ್ಥರಿಂದ ಸನ್ಮಾನ ಮಾಡಲಾಯಿತು.
ತಾಲೂಕಿನ ಕಕ್ಕಿಹಳ್ಳಿ ತಾಂಡಾದ ಆನಂದ ಹಾಗೂ ಲಕ್ಷ್ಮಿ ಹೊನ್ನುಂಚಿ ದಂಪತಿಯ ಹಿರಿಯ ಪುತ್ರಿಯಾದ ಸುಷ್ಮಾ ಅವರು ಓದಿನೊಂದಿಗೆ ಕ್ರೀಡೆಯಲ್ಲಿಯೂ ಗಮನಾರ್ಹ ಸಾಧನೆ ಮಾಡುವ ಮೂಲಕ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಯನ್ನು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಅಭಿನಂದಿಸಿದ್ದಾರೆ. ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಗುರುಗಳ ಮಾರ್ಗದರ್ಶನದಿಂದಲೇ ಇಂತಹ ಸಾಧನೆ ಸಾಧ್ಯವಾಗುತ್ತದೆ. “ಸಾಧನೆಗೆ ಬಡತನ ನೆಪವಾಗಬಾರದು. ವಿದ್ಯಾರ್ಥಿಗಳು ಸುಷ್ಮಾ ಅವರಂತೆ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು” ಎಂದು ಹೇಳಿದರು.
ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಿಂದಿನಿಂದಲೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಇದಕ್ಕೆ ಶಾಲೆಯ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷಕ ರಾಜು ರಾಠೋಡ ಅವರ ನಿರಂತರ ಶ್ರಮವೂ ಕಾರಣವಾಗಿದೆ ಎಂದು ಸುರೇಶ ಬಳೂಟಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಸುಷ್ಮಾ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಅವರು ಶುಭ ಹಾರೈಸಿದರು.
ವಿದ್ಯಾರ್ಥಿನಿಯ ಸಾಧನೆಗೆ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿ, ಶಾಲಾ ಸುಧಾರಣಾ ಸೇವಾ ಸಮಿತಿಯ ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಸರ್ವ ಶಿಕ್ಷಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮತಿ ಮಾನವ್ವ ತಲ್ಲೂರು, ಶಿವನವ್ವ ಹೊನ್ನುಂಚಿ, ಮಂಜುನಾಥ ಹೊನ್ನುಂಚಿ, ರಾಘವೇಂದ್ರ ಬಳಗೇರಿ, ಸೋಮಪ್ಪ ಕಾರಭಾರಿ, ಕಿರಣ ರಾಠೋಡ, ನಾಗರಾಜ ಭಾನಾಪುರ, ಮಹೇಶ ಕಾರಭಾರಿ, ವಿಜಯ ಚವ್ಹಾಣ, ರವಿ ಕಟ್ಟಿಮನಿ, ಚಂಗುಮಣಿ ಮನ್ನಾಪುರ, ಉಮೇಶ ಬಳಗೇರಿ, ಮಂಜುನಾಥ ಗೆದಗೇರಿ, ರುದ್ರಯ್ಯ, ಶರಣಯ್ಯ ಸೇರಿದಂತೆ ಅನೇಕ ಯುವಕರು ಹಾಗೂ ಯುವತಿಯರು ಉಪಸ್ಥಿತರಿದ್ದು, ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದರು.
“ಮಗಳ ಸಾಧನೆ ನಮಗೆ ಹೆಮ್ಮೆಯ ಸಂಗತಿ. ರಾಜ್ಯಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಲಿ ಎಂಬುದು ನಮ್ಮ ಆಶಯ. ಪ್ರೋತ್ಸಾಹ ನೀಡಿದ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಧನ್ಯವಾದಗಳು,”