BREAKING : ಕುಕನೂರು | ರಸ್ತೆ ಅಪಘಾತದಲ್ಲಿ ಯುವಕ ಸಾವು; ಮೂವರಿಗೆ ಗಾಯ!
PV NEWS ಕನ್ನಡ 24×7
ಕುಕನೂರು, ಅ. 09 : ಬೈಕ್‌ಗೆ ಮತ್ತೊಂದು ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಕುಕನೂರು–ಬನ್ನಿಕೊಪ್ಪ ರಸ್ತೆಯ ಭಟ್ಟಪ್ಪನಹಳ್ಳಿ ಕ್ರಾಸ್ ಬಳಿ ಗುರುವಾರ ನಡೆದಿದೆ.
ಕುಕನೂರು ಪಟ್ಟಣದ ನಿವಾಸಿ ಕಿರಣ ಈರಪ್ಪ ಕೋಟಿ (25) ಮೃತಪಟ್ಟವರು.
ಕುಕನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಕಿರಣ ಅವರು ಗುರುವಾರ ಬೆಳಿಗ್ಗೆ 9:10ರ ಸುಮಾರಿಗೆ ತಮ್ಮ ಮೋಟಾರ್‌ಸೈಕಲ್‌ನಲ್ಲಿ ಕುಕನೂರಿನಿಂದ ಮಂಡಲಗೇರಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ವೀರೇಶ ಮರಿಯಪ್ಪ ವಡ್ಡರ (20) ಎಂಬುವರು ಆಕಾಶ ಕಲ್ಲಿನಾಥ ಹೂಗಾರ (20) ಹಾಗೂ ಕನಕರಾಯ ಶರಣಪ್ಪ ಗೌಡರ (20) ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತೆರಳುತ್ತಿದ್ದಾಗ ಭಟ್ಟಪ್ಪನಹಳ್ಳಿ ಕ್ರಾಸ್ ಬಳಿ ಕಿರಣ ಅವರ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಕ್ಕಿಯ ರಭಸಕ್ಕೆ ಕಿರಣ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಮೂಗು ಹಾಗೂ ಕಿವಿಯಿಂದ ರಕ್ತಸ್ರಾವವಾಗಿತ್ತು. ಅವರನ್ನು ಕುಕನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಕೆ.ಎಸ್. ಆಸ್ಪತ್ರೆಗೆ ಕರೆದೊಯ್ಯಲಾಯಿತು.ಬಳಿಕ ವೈದ್ಯರ ಸಲಹೆಯಂತೆ ಹುಬ್ಬಳ್ಳಿಗೆ ಕರೆದೊಯ್ಯುತ್ತಿದ್ದಾಗ ಅಣ್ಣಿಗೇರಿ ಸಮೀಪ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಲ್ಲಿ ವೀರೇಶ, ಆಕಾಶ ಹಾಗೂ ಕನಕರಾಯ ಅವರಿಗೂ ಗಾಯಗಳಾಗಿವೆ.
ಈ ಕುರಿತು ಕಿರಣ ಅವರ ಸಹೋದರ ಮಲ್ಲಿಕಾರ್ಜುನ ಈರಪ್ಪ ಕೋಟಿ ನೀಡಿದ ದೂರಿನ ಆಧಾರದ ಮೇಲೆ ಕುಕನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 133/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 281, 106, 125(ಎ), 125(ಬಿ) ಅಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.