ಮುಧೋಳ ಗ್ರಾಮದಲ್ಲಿ ಗ್ರಾಮೀಣ ಆರೋಗ್ಯ ಅಮೃತ ಅಭಿಯಾನ ಶಿಬಿರ, ರೋಜಗಾರ್ ದಿನಾಚರಣೆಯಲ್ಲಿ 410 ಜನರಿಗೆ ತಪಾಸಣೆ.
ಯಲಬುರ್ಗಾ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮ ಪಂಚಾಯತಿಯಲ್ಲಿ ಚಕ್ ಡ್ಯಾಮ್ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಕೆಎಚ್ ಪಿಟಿ, ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಆರೋಗ್ಯ ಅಮೃತ ಅಭಿಯಾನ ಹಾಗೂ ರೋಜಗಾರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಕುಶಲ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಯಲಬುರ್ಗಾ ತಾಲೂಕು ಪಂಚಾಯತಿ ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಮಾತನಾಡಿ, ಜಲಸಂಜೀವಿನಿ ಯೋಜನೆಯಡಿ ಜಲಮೂಲಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಓಡುವ ಮಳೆ ನೀರನ್ನು ನಿಲ್ಲುವಂತೆ ಮಾಡಬೇಕು. ನಿಂತ ನೀರನ್ನು ಇಂಗುವಂತೆ ಮಾಡಬೇಕು. ಇದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ತಮ್ಮ ಗ್ರಾಮದಲ್ಲೆ ನರೇಗಾದಡಿ ಅಕುಶಲ ಕಾರ್ಮಿಕರಿಗೆ ಕೆಲಸ ಕೊಟ್ಟು ಪ್ರತಿದಿನಕ್ಕೆ 316 ರೂಪಾಯಿ ಕೂಲ ಹಣವನ್ನು ಕೊಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ತಮಗಾಗಿ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ಥಳದಲ್ಲಿದ್ದ 410 ಕೂಲಿಕಾರರಿಗೆ ಬಿಪಿ, ಶುಗರ್ ತಪಾಸಣೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಹನಮವ್ವ ಯಲ್ಲಪ್ಪ ವಡ್ಡರ್, ಉಪಾಧ್ಯಕ್ಷರಾದ ಬಾಸುಸಾಬ್ ಇಮಾಮ್ ಸಾಬ ಆರಬಳ್ಳಿನ್, ಕಾರ್ಯದರ್ಶಿಗಳಾದ ಹುಲಗಪ್ಪ ನಿಂಗಪ್ಪ, ಕರವಸೂಲಿಗಾರರಾದ ಕರಿಸಿದ್ದಪ್ಪ ತಮ್ಮಿನಾಳ, ಬಿಎಫ್ ಟಿ ಗುರುಬಸಯ್ಯ ಮಠಪತಿ, ಆರೋಗ್ಯ ಸಿಬ್ಬಂದಿಗಳಾದ ಗುರುಸಿದ್ದನಗೌಡ, ಶಾರದಾ, ಅಂಜುಮಾ ಬೇಗಂ, ಕಾಯಕ ಬಂಧುಗಳು ಹಾಗೂ 410 ಅಕುಶಲ ಕಾರ್ಮಿಕರು ಹಾಜರಿದ್ದರು.