ಕೊಪ್ಪಳ : ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತ ಅಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ತಿಳಿಸಿದ್ದಾರೆ.
ಮಾವಿನ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡನ್ನು ಬಳಸುವುದು ಎಫ್.ಎಸ್.ಎಸ್.ಎ ಕಾಯ್ದೆ ಅನ್ವಯ ದಂಡನೀಯ ಅಪರಾಧವಾಗಿದೆ. ಕ್ಯಾಲ್ಸಿಯಂ ಕಾರ್ಬೈಡ್ ನಿಂದಾಗಿ ಉಸಿರಾಟದ ತೊಂದರೆಗಳು, ಚರ್ಮ ಕಾಯಿಲೆಗಳು ಮತ್ತು ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಎಫ್.ಎಸ್.ಎಸ್.ಎ ಕಾಯ್ದೆ ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು (prohibition and restrictions on sale) ರೆಗ್ಯೂಲೇಷನ್ ಸಂಖ್ಯೆ 2,3,5 ಪ್ರಕಾರ ಕಾರ್ಬೈಡ್ ಗ್ಯಾಸ್ ಕೃತಕವಾಗಿ ಹಣ್ಣು ಮಾಡಲು ನಿಷೇಧಿಸಿದೆ. ಆಹಾರ ಸುರಕ್ಷತಾ ಕಾಯ್ದೆ ಕಲಂ 58ರ ಪ್ರಕಾರ ರೂ.2 ಲಕ್ಷದವರೆಗೂ ದಂಡ ವಿಧಿಸಬಹುದಾಗಿದೆ.
ಗ್ರಾಹಕರು ಮಾವಿನ ಹಣ್ಣುಗಳನ್ನು ಖರೀದಿಸುವ ಸಂದರ್ಭದಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಪೊಟ್ಟಣಗಳನ್ನು ಇಟ್ಟು ಕೃತಕವಾಗಿ ಹಣ್ಣುಗಳು ಮಾಗಿಸುವುದು ಕಂಡುಬಂದಲ್ಲಿ ಅಂಕಿತ ಅಧಿಕಾರಿಗಳು, ಎಫ್.ಎಸ್.ಎಸ್.ಎ ಕಚೇರಿ, ಹಳೆ ಜಿಲ್ಲಾ ಆಸ್ಪತ್ರೆ ಆವರಣ, ಅಶೋಕ ವೃತ್ತದ ಹತ್ತಿರ, ಕೊಪ್ಪಳ ಇವರ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.