BIG NEWS : ನಮ್ಮ ಸರ್ಕಾರ ಬಡವರ ಪರ ಸರ್ಕಾರವಾಗಿದೆ – ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ : ನಮ್ಮ ಸರ್ಕಾರ ಬಡವರ ಪರ ಸರ್ಕಾರವಾಗಿದ್ದು ಅವರ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದರು.
ಶುಕ್ರವಾರದಂದು (ಡಿಸೇಂಬರ್ 19 ರಂದು) ಯಲಬುರ್ಗಾ ಪಟ್ಟಣದಲ್ಲಿ ಬಿ.ಎಸ್.ಸಿ. ನರ್ಸಿಂಗ್ ಕಾಲೇಜು ಪ್ರಾರಂಭೋತ್ಸವ ಮತ್ತು ಅಡಿಗಲ್ಲು ಸಮಾರಂಭ. ತಾಲ್ಲೂಕು ಪಂಚಾಯತ್ ಆಡಳಿತ ಭವನದ ಅಡಿಗಲ್ಲು ಸಮಾರಂಭ ಹಾಗೂ ಶಿಕ್ಷಕರ ತರಬೇತಿ ಕೇಂದ್ರ (ಬಿ.ಇ.ಓ) ಕಛೇರಿ ಶಂಕುಸ್ಥಾಪನೆ ಮತ್ತು ಯಲಬುರ್ಗಾ- ಕುಕನೂರ ಪಟ್ಟಣ ಪಂಚಾಯತಿಯಿಂದ ಮಲ ಕೆಸರು ಸಂಸ್ಕರಣಾ ಘಟಕ ( ಎಫ್.ಎಸ್.ಟಿ.ಸಿ) ಶಂಕುಸ್ಥಾಪನೆ. ಬಾಲ ಭವನ ಅಂಗನವಾಡಿ ತರಬೇತಿ ಕೇಂದ್ರ( ಸಿ.ಡಿ.ಪಿ.ಓ) ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದ ನಂತರ ಯಲಬುರ್ಗಾ ಪಟ್ಟಣ ಪಂಚಾಯತ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಮುಖ್ಯಮಂತ್ರಿಗಳು ಬಡವರ ಪರ ಕೆಲಸ ಮಾಡುವವರಾಗಿದ್ದು ಅವರು ಬಡವರಿಗಾಗಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ.ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಅವುಗಳನ್ನು ಪಾಲಿಸಿಕೊಂಡು ಬರುತ್ತಿದ್ದೆವೆ. ನಮ್ಮ ರಾಜ್ಯದ ಜಿಡಿಪಿ ಇಡೀ ದೇಶದಲ್ಲಿ ಹೆಚ್ಚಿದೆ. ಬಡವರ ಅನುಕೂಲಕ್ಕಾಗಿ ಹೆಚ್ಚು ಬಿಪಿಎಲ್ ಕಾರ್ಡಗಳನ್ನು ನಾವು ನೀಡಿದ್ದೆವೆ. ಯಲಬುರ್ಗಾ ಕ್ಷೇತ್ರದ ಶಾಲಾ- ಕಾಲೇಜುಗಳು ಮತ್ತು ಹಾಸ್ಟೆಲಗಳನ್ನು ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಇದು ಅಭಿವೃದ್ಧಿಯ ಮತಕ್ಷೇತ್ರವಾಗಿದೆ. ಬಸವರಾಜ ರಾಯರಡ್ಡಿ ಅವರು ಜನಪರ ಕಾಳಜಿಯ ನಾಯಕರಾಗಿದ್ದಾರೆ ಎಂದು ಹೇಳಿದರು.
ಯಲಬುರ್ಗಾದಲ್ಲಿ ಇಂದು ನರ್ಸಿಂಗ್ ಕಾಲೇಜಿನ ಉದ್ಘಾಟನೆ ಮತ್ತು ಅಡಿಗಲ್ಲು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮಾಡಿದ್ದೆನೆ. ನಮ್ಮ ರಾಜ್ಯ ದೇಶದಲ್ಲಿ ಅತಿ ಹೆಚ್ಚು ನರ್ಸಿಂಗ್ ಕಾಲೇಜುಗಳನ್ನು ಹೊಂದಿದೆ. 800 ಬಿಎಸ್ಸಿ ನರ್ಸಿಂಗ್. 600 ಬಿಎಸ್ಸಿ ಡಿಪ್ಲೊಮಾ ನರ್ಸಿಂಗ್ ಕಾಲೇಜುಗಳಿದ್ದು ಬೇರೆ ರಾಜ್ಯಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ. ಇದು ನಮ್ಮ ನಾಯಕರ ದೂರ ದೃಷ್ಟಿಯಾಗಿದೆ. ನರ್ಸಿಂಗ್ ಕೋರ್ಸ್ ಮಾಡಿದವರಿಗೆ ಶೇ. 100 ಪ್ರತಿಶತ ಉದ್ಯೋಗ ದೊರೆಯುತ್ತದೆ ಇದರಿಂದ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಲಿದೆ. ಜಿಟಿಟಿಸಿ ಕೋರ್ಸ್ ಮಾಡಿದವರಿಗೂ ಶೇ. 100 ಉದ್ಯೋಗ ದೊರೆಯುತ್ತದೆ. ಯುವಕರಿಗೆ ಉದ್ಯೋಗ ಆಧಾರಿತ ಸರಿಯಾದ ಶಿಕ್ಷಣ ನೀಡಬೇಕಿದೆ. ತಳಕಲನಲ್ಲಿ ಮಲ್ಟಿಸ್ಕಿಲ್ ಕೇಂದ್ರವನ್ನು ಮಾಡುತ್ತಿದ್ದೆವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕವಾಗಿ ಜಾರಿ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡುತ್ತಿದೆ. ಈ ದಿಶೆಯಲ್ಲಿ ಇಂದು ಯಲಬುರ್ಗಾ ಪಟ್ಟಣದಲ್ಲಿ ಬಿ.ಎಸ್.ಸಿ. ನರ್ಸಿಂಗ್ ಕಾಲೇಜು ಪ್ರಾರಂಭೋತ್ಸವ ಮತ್ತು ಅಡಿಗಲ್ಲು ಸಮಾರಂಭ, ತಾಲೂಕ ಪಂಚಾಯತ್ ಆಡಳಿತ ಭವನದ ಅಡಿಗಲ್ಲು ಸಮಾರಂಭ ಹಾಗೂ ಶಿಕ್ಷಕರ ತರಬೇತಿ ಕೇಂದ್ರ (ಬಿ.ಇ.ಓ) ಕಛೇರಿ ಶಂಕುಸ್ಥಾಪನೆ ಮತ್ತು ಯಲಬುರ್ಗಾ-ಕುಕನೂರ ಪಟ್ಟಣ ಪಂಚಾಯತಿಯಿಂದ ಮಲ ಕೆಸರು ಸಂಸ್ಕರಣಾ ಘಟಕ (ಎಫ್.ಎಸ್.ಟಿ.ಪಿ.) ಶಂಕುಸ್ಥಾಪನೆ. ಬಾಲ ಭವನ, ಅಂಗನವಾಡಿ ತರಬೇತಿ ಕೇಂದ್ರ (ಸಿ.ಡಿ.ಪಿ.ಓ.) ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾರಂಭದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದರಿಂದ ವಿದ್ಯಾರ್ಥಿಗಳ ಡೊನೆಶನ ಮೊತ್ತವು ಉಳಿದಿದೆ. ನಮ್ಮ ಸರ್ಕಾರವು ಜನಪರವಾದ ಮತ್ತು ಅತ್ಯುತ್ತಮವಾದ ಕೆಲಸಗಳನ್ನು ಮಾಡುತ್ತಿದ್ದು, ದೇಶದಲ್ಲಿ ಅತೀ ಹೆಚ್ಚು ಜಿಡಿಪಿ ಹೊಂದಿದೆ. ಇದಲ್ಲದೆ ದೇಶದಲ್ಲೇ ಹೆಚ್ಚಿನ ಸಂಖ್ಯೆಯ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ 900 ಹೊಸ ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು, ಇದರಲ್ಲಿ ನಮ್ಮ ಯಲಬುರ್ಗಾ ಕ್ಷೇತ್ರಕ್ಕೆ ಕೆ.ಕೆ.ಆರ್.ಡಿ.ಬಿ.ಯಿಂದ 8, ಎಡಿಬಿ ಅಡಿ 4 ಸೇರಿ ಒಟ್ಟು 12 ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ಮುಂದೆ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಇದರಿಂದ ಯಲಬುರ್ಗಾ ಕ್ಷೇತ್ರದಲ್ಲಿ ಎಲ್.ಕೆ.ಜಿ ಯಿಂದ ಪಿಜಿ ವರೆಗೆ ಓದುವ ಮಕ್ಕಳಿಗೆ ಶಿಕ್ಷಣಕ್ಕೆ ಎಲ್ಲಾ ರೀತಿಯ ಸೌಲಭ್ಯ ಸಿಗಲಿದೆ. ಕೌಶಲ್ಯ ಕೇಂದ್ರಕ್ಕೆ 57 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಆಗಿದ್ದು, ಪ್ರತಿವರ್ಷ 2 ರಿಂದ 2.5 ಸಾವಿರ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಸಿಗಲಿದೆ. ಇದರಿಂದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ದೇಶ ಮತ್ತು ವಿದೇಶಗಳಲ್ಲಿ ಉದ್ಯೋಗ ಸಿಗಲು ಅನುಕೂಲವಾಗಲಿದೆ. ಕೆರೆ ತುಂಬಿಸುವ ಯೋಜನೆಗೆ ಈ ಬಾರಿ ನಮ್ಮ ಕ್ಷೇತ್ರಕ್ಕೆ 272 ಕೋಟಿ ರೂ.ಗಳು ಮಂಜುರಾಗಿದ್ದು, ಮುಂಬರುವ ಫೆಬ್ರವರಿ ಮಾಹೆಯಲ್ಲಿ ಟೆಂಡರ್ ಕರೆದು ಮಾರ್ಚ್ ಮಾಹೆಯಿಂದ ಯಲಬುರ್ಗಾ ಕ್ಷೇತ್ರದ 19 ಹಳ್ಳಿಗಳ ಕರೆಗಳಿಗೆ ಕೃಷ್ಣ ನದಿಯಿಂದ ನೀರು ತುಂಬಿಸುಬ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ಯಲಬುರ್ಗಾದ ಸರ್ಕಾರಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರದಿಂದ 10 ಎಕರೆ ಭೂಮಿಯನ್ನು ಉಚಿತವಾಗಿ ನೀಡಿದ್ದು, 9.85 ಕೋಟಿ ರೂ.ಗಳನ್ನು ಕಾಲೇಜಿನ ಸಿಬ್ಬಂದಿಗಳ ಮತ್ತು ಪ್ರಯೋಗಾಲಯ ಮತ್ತು ಇತರೆ ಕಟ್ಟಡಗಳ ನಿರ್ಮಾಣಕ್ಕೆ ನೀಡಲಾಗಿದೆ. ಇಂದು ಈ ಕಾಲೇಜಿನ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಉದ್ಘಾಟನೆಯನ್ನು ಮಾಡಿದರು. ಈ ಸರ್ಕಾರಿ ನರ್ಸಿಂಗ್ ಕಾಲೇಜಿಗೆ ಮುಂದಿನ ಮೂರು ವರ್ಷಗಳ ಅವದಿಗೆ ಕಾಲೇಜಿಗೆ ಬೇಕಾದ ಸಿಬ್ಬಂದಿಗಳ ವೇತನ ಮತ್ತು ಮೂಲ ಸೌಕರ್ಯಗಳಿಗೆ ಬೇಕಾದ ಹಣವನ್ನು ಸಹ ಕೆ.ಕೆ.ಆರ್.ಡಿ.ಬಿ ಯಿಂದ ಒದಗಿಸಲಾಗುವುದು ಎಂದರು.
ಅಲ್ಲದೆ ಯಲಬುರ್ಗಾ ತಾಲೂಕು ಪಂಚಾಯತ ಕಟ್ಟಡ ನಿರ್ಮಾಣಕ್ಕೆ ಕೆ.ಕೆ.ಆರ್.ಡಿ.ಬಿ ವತಿಯಿಂದ 3 ಕೋಟಿ 80ಲಕ್ಷ ರೂ. ಗಳು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಬಾಲ ಭವನ ಮತ್ತು ಅಂಗನವಾಡಿ ತರಬೇತಿ ಕೇಂದ್ರಕ್ಕೆ 3.12 ಕೋಟಿ ರೂ. ಮತ್ತು ಶಿಕ್ಷಕರ ತರಬೇತಿ ಕೇಂದ್ರಕ್ಕೆ 2 ಕೋಟಿ ನೀಡುವುದರ ಜೊತೆಗೆ ಯಲಬುರ್ಗಾ ಮತ್ತು ಕುಕನೂರು ಪಟ್ಟಣದ ಎಸ್.ಟಿ.ಪಿ.ಗೆ ಸುಮಾರು 3 ಕೋಟಿ ಅನುದಾನ ನೀಡಲಾಗಿದೆ. ಈ ದಿನ ಎಲ್ಲಾ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಸಚಿವರು ನೆರವೇರಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ. ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ. ಸಹಾಯಕ ಆಯುಕ್ತರಾದ ಮಹೇಶ್ ಮಾಲಗಿತ್ತಿ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತಕುಮಾರ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ಪಿ. ವೈ. ಶೆಟ್ಟೆಪ್ಪನವರ್. ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಾದ ಸೋಮಶೇಖರಗೌಡ ಪಾಟೀಲ ಸೇರಿದಂತೆ ಇತರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.