ಧೂಮಂ ಸಿನಿಮಾ ನಿರೀಕ್ಷೆಗೆ ಎರಡು ಕಾರಣ ಇದೆ. ಒಂದು
ಪವನ್ ಕುಮಾರ್ ನಿರ್ದೇಶನ, ಎರಡು ಫಹದ್ ಫಾಸಿಲ್ ನಟನೆ.
ಮಲಯಾಳಂನಲ್ಲಿ ನೋಡಿದ್ದು. ಇದು ಪವನ್ ಸಿನಿಮಾ ಅಲ್ಲ ಅನಿಸ್ತು. ಫಹದ್, ರೋಶನ್ ಮಾಥ್ಯೂ ನಟನಾ ಸಾಮರ್ಥ್ಯದ ಮುಂದೆ ಸ್ಕ್ರಿಪ್ಟ್ ಎದ್ದು ನಡೆಯುವುದಕ್ಕೆ, ನುಡಿಯುವುದಕ್ಕೆ ಸಾಹಸಪಡುತ್ತಿರುವ ಹಾಗೆ ಅನಿಸಿತು. ಪಾತ್ರಗಳೆಲ್ಲ ಒಕೆ. ಆದ್ರೆ ಕತೆಯೇ ಸಮಸ್ಯೆ. ಏನನ್ನು ಹೇಗೆ ಹೇಳಬೇಕಿತ್ತೋ ಹಾಗೆ ಹೇಳಲು ಸಾಧ್ಯ ಆಗಿಲ್ಲ.
ಇನ್ನೊಂದು ಮುಖ್ಯ ಸಮಸ್ಯೆ ಕನ್ನಡದ ಮಾದರಿಯನ್ನು ಮಲಯಾಳಂಗೆ ಅಳವಡಿಸಿದ್ದು. ‘ಡಬ್ಬಿಂಗ್ ಸಿನಿಮಾ ನೋಡಿದ ಹಾಗೆ ಅನಿಸಿತು’ ಎನ್ನುವುದು ಬಹುತೇಕ ಮಲಯಾಳಂ ಪ್ರೇಕ್ಷಕರ ಅಭಿಪ್ರಾಯ. ಫಹದ್ ಮಾತನಾಡುವಾಗ, ಅದು ಫಹದ್ ಅಂತನೇ ಅನಿಸ್ತಿರಲಿಲ್ಲ. ಎಲ್ಲ ಪಾತ್ರಗಳ ಡೈಲಾಗ್ ಗಳೂ ನಾಟಕೀಯ ಆಗಿದ್ದವು ಅಂತ ಮಲಯಾಳಂ ಪ್ರೇಕ್ಷಕರು, ವಿಮರ್ಶಕರು ಹೇಳುತ್ತಿದ್ದಾರೆ. ಅವರು ಹೇಳಿದ್ದು ನಿಜ. ಮಲಯಾಳಂ ಸಿನಿಮಾದಲ್ಲಿ ಭಾಷೆಯ ಬಳಕೆಯಲ್ಲಿ ನಾಟಕೀಯತೆ ಇರುವುದಿಲ್ಲ. ಅವರು ನಿತ್ಯಬದುಕಿನಲ್ಲಿ ಮಾತಾಡುವ ಹಾಗೆಯೇ ಸಿನಿಮಾದಲ್ಲಿ ಸಂಭಾಷಣೆ ಇರುತ್ತದೆ. ಅದು ಈ ಸಿನಿಮಾದಲ್ಲಿ ಕಾಣದೆ ಇದ್ದದ್ದು ಆ ಪ್ರೇಕ್ಷಕರನ್ನು ತುಂಬಾ ನಿರಾಸೆಗೊಳಿಸಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ, ‘ಬೇರೆ ಭಾಷೆ ಎನ್ನುವ ವಿಷಯಕ್ಕಿಂತ ಮುಖ್ಯ ಎಲ್ಲರಿಗೂ ಅರ್ಥವಾಗುವ ಭಾಷೆ ‘ಸಿನಿಮಾಟಿಕ್ ಲಾಂಗ್ವೇಜ್’ ಎನ್ನುವುದು’ ಅಂತ ಪವನ್ ಹೇಳಿದ್ದರು. ಅದನ್ನಾದರೂ ಸರಿಯಾಗಿ ಮಾಡಿದ್ದರೆ ಜನ ಒಪ್ಪುತ್ತಿದ್ದರೇನೊ.
ಕಾಂತಾರ ಸಿನಿಮಾ ಬಿಡುಗಡೆ ಆದ ನಂತರ ಜನರ ಬಾಯಿಂದ ಬಾಯಿಗೆ ಸಿನಿಮಾದ ಅನಿಸಿಕೆ ತಲುಪಿ ಪ್ರಚಾರ ಪಡೆಯಿತು. ಥಿಯೇಟರಿಗೆ ಜನ ಬಂದರು. ಮತ್ತೆ ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಿದ್ರು. ಹೊಂಬಾಳೆ ಪ್ರೊಡಕ್ಷನ್ ಇದೇ ನಿರೀಕ್ಷೆಯನ್ನು ಧೂಮಂ ಮೇಲೂ ಇಟ್ಟಿರಬೇಕು. ಜನರೇ ಪ್ರಚಾರ ಕೊಡಲಿ ಅಂತ.
ಸಿನಿಮಾದ ಕೊನೆಯಲ್ಲಿ ಧೂಮಂ ಭಾಗ 2ರ ಸುಳಿವು ಕೊಟ್ಟಿದ್ದಾರೆ. ನನಗನಿಸಿದ ಮಟ್ಟಿಗೆ ಇದು ಪವನ್ ಅವರ ನಿರ್ಧಾರ ಅಲ್ಲ. ಇದೊಂದು ಹೇರಲಾದ ಒತ್ತಡ. ಭಾಗ 1,2,3 ಅಂತ ಮಾಡಿಕೊಂಡು, ದೂಡಿಕೊಂಡು ಹೋಗುವುದು ಹೊಂಬಾಳೆ ಗುಣ. ಕಾಂತಾರ 2, ಕೆಜಿಎಫ್ 3ಯ ನಿರೀಕ್ಷೆಯ ಜೊತೆಗೆ ಇದೂ ಇರಲಿ ಅಂತ. ಆದ್ರೆ ಧೂಮಂ ಪಾರ್ಟ್ 2 ಮಾಡುವ ಸಾಹಸಕ್ಕೆ ಪವನ್ ಕೈ ಹಾಕದೆ ಸುಮ್ಮನಿರುವುದೇ ಒಳ್ಳೆಯದು ಅಂತ ಅನಿಸ್ತಿದೆ. ಅದು ಅವರ ಮೇಲಿನ ಭರವಸೆಯನ್ನು ಇನ್ನಷ್ಟು ಕುಗ್ಗಿಸಬಹುದೇ ಹೊರತು ಮೇಲೆತ್ತಲು ಸಾಧ್ಯ ಇಲ್ಲ. ಜೊತೆಗೆ ಇದು ಹೊಂಬಾಳೆಗೂ ಹೊಡೆತವನ್ನೇ ಕೊಡಬಹುದು.
ಫಹದ್, ಕಥೆಗಳ ಆಯ್ಕೆ ವಿಚಾರದಲ್ಲಿ ಗಂಭೀರವಾಗಿ ಚಿಂತಿಸದಿದ್ದರೆ ಅವರ ಸಾಮರ್ಥ್ಯವನ್ನು, ಅವರೇ ಶ್ರಮಪಟ್ಟು ರೂಪಿಸಿಕೊಂಡ ಅವರ ಕೆರಿಯರ್ ಅನ್ನು ಅವರೇ ಕೆಡವಿದಂತಾಗಬಹುದು. ನಟನಾ ಮಾದರಿಯಲ್ಲಿಯೂ ಅವರಿಗೊಂದು Transformationನ ಅಗತ್ಯ ಇದೆ. ವಿಕ್ರಂ, ಧೂಮಂ ಮಾದರಿಯ ಅವರ ನಟನೆ ಈಗೀಗ ಸಾಮಾನ್ಯ ಅನಿಸತೊಡಗಿದೆ. ಧೂಮಂನಲ್ಲಿ ಅವರ ಪಾತ್ರ ಸವಾಲಿನದ್ದೇನೂ ಅಲ್ಲ.
ಈ ಸಿನಿಮಾದ ಕನ್ನಡ ವರ್ಷನ್ ಗೆ ಯೋಗರಾಜ್ ಭಟ್ ಬಹಳ ಸಮಯದ ನಂತರ ಶ್ರಮಪಟ್ಟು ಒಂದೊಳ್ಳೆಯ ಹಾಡು ಬರೆದಿದ್ದಾರೆ. ಅದೇ ರಾಗದ ಮಲಯಾಳಂ ಹಾಡು ಮಾತ್ರ ಅಷ್ಟು ಹಿಡಿಸಿಲ್ಲ.
ಹಾಗಂತ ಈ ಸಿನಿಮಾ ಕಾರಣಕ್ಕೆ ಪವನ್ ಮೇಲಿನ ಭರವಸೆ ಕಳೆದುಕೊಳ್ಳಬೇಕಿಲ್ಲ.
ಕೃಪೆ :- ಫೇಸ್ಬುಕ್