ವಿಜಯನಗರ / ಕೊಪ್ಪಳ : ರಾಜ್ಯದ ಮಳೆನಾಡಿನಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇತ್ತ ಕಲ್ಯಾಣ-ಕರ್ನಾಟಕ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಜಲಾಶಯದಲ್ಲಿ ಸುಮಾರು 59,500 ಕ್ಯೂಸೆಕ್ ನೀರು ಒಳಹರಿವಿದ್ದು, ಕಳೆದ 24 ಗಂಟೆಯಲ್ಲಿ 5 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಹಲವು ದಿನಗಳಿಂದ ಸಂಪೂರ್ಣ ಖಾಲಿಯಾಗಿದ್ದ ಜಲಾಶಯ ಇದೀಗ ಮಳೆಯ ಪ್ರಮಾಣದ ಹಿನ್ನೆಲೆಯಲ್ಲಿ ನೀರಿನಿಂದ ಭರ್ತಿಯಾಗಿರುವುದು ಕಂಡು ಜನರು ಹರ್ಷಗೊಂಡಿದ್ದಾರೆ. ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಐದು ಟಿಎಂಸಿಗೂ ಅಧಿಕ ಪ್ರಮಾಣದ ನೀರು ಹರಿದು ಬಂದಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಆದಷ್ಟು ಬೇಗ ನೀರು ಹರಿದು ಜಲಾಶಯ ತುಂಬಬೇಕು ಎನ್ನುವುದು ಈ ಭಾಗದ ರೈತರ ದೊಡ್ಡಾದ ಆಶಯ ಆಗಿತ್ತು. ಜಲಾಶಯ ಪೂರ್ಣ ಭರ್ತಿಯಾದರೆ ಇಲ್ಲಿನ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಹೀಗಾಗಿ ಇನ್ನೂ ಹೆಚ್ಚಿನಮಳೆಯಾಗಬೇಕು ಎಂಬುವುದು ಈ ಬಾಗದ ರೈತರ ಆಶಯವಾಗಿದೆ.
ವರದಿ : ಚಂದ್ರು ಆರ್ ಭಾನಾಪೂರ್